ಕುದುರೆಮುಖ ಚಾರಣ ಈಗ ಹೆಚ್ಚು ಸುರಕ್ಷಿತ

ಕುದುರೆಮುಖದ ಹಸಿರು ಹೊದಿಕೆಯ ಬೆಟ್ಟಗಳು ಕಣ್ಮನ ಸೆಳೆಯುತ್ತಿದೆ.
ಕುದುರೆಮುಖದ ಹಸಿರು ಹೊದಿಕೆಯ ಬೆಟ್ಟಗಳು ಕಣ್ಮನ ಸೆಳೆಯುತ್ತಿದೆ.
Published on
ಮಂಗಳೂರು: ಮೋಡಗಳ ನಡುವೆ ಸಾಗುವ ಹಾದಿ, ಹಸಿರಿನ ಹೊದಿಕೆಯ ಬೆಟ್ಟಗಳು, ಪ್ರಕೃತಿಯ ನಿಶ್ಶಬ್ದ ಸೌಂದರ್ಯ...
ಇಂತಹ ಅಪೂರ್ವ ಅನುಭವ ನೀಡುವ 1892 ಮೀಟರ್ ಎತ್ತರದಲ್ಲಿರುವ ಪಶ್ಚಿಮಘಟ್ಟದ ಕುದುರೆಮುಖ ಟ್ರೆಕ್ಕಿಂಗ್ ಇನ್ನು ಮುಂದೆ ಮತ್ತಷ್ಟು ಸುರಕ್ಷಿತವಾಗಲಿದೆ. ಪ್ರವಾಸಿಗರ ಸುರಕ್ಷತೆ, ತ್ವರಿತ ತುರ್ತು ನೆರವು ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಅರಣ್ಯ ಇಲಾಖೆ ಹೊಸ ಎಸ್‌ಒಪಿ ಜಾರಿಗೊಳಿಸಿದೆ. ಗೈಡ್, ವಾಕಿಟಾಕಿ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳೊಂದಿಗೆ ಕುದುರೆಮುಖ ಟ್ರೆಕ್ಕಿಂಗ್ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ.
ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಕುದುರೆಮುಖಕ್ಕೆ ಬರುತ್ತಾರೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್ ವ್ಯವಸ್ಥಿತಗೊಳಿಸಲು, ಅನಾಹುತಕ್ಕೆ ಅವಕಾಶ ನೀಡದಂತೆ ಇಲಾಖೆ ಸಮಗ್ರ ಭದ್ರತಾ ಕ್ರಮ ಕೈಗೊಂಡಿದೆ. ಪ್ರಸ್ತುತ ಗಂಗಡಿಕಲ್ಲು, ಕುರಿಂಜಾಲು, ನೇತ್ರಾವತಿ, ಕುದುರೆಮುಖ, ಬಂಡಾಜೆ ಫಾಲ್ಸ್, ಬಲ್ಲಾಳರಾಯನದುರ್ಗ ಹಾಗೂ ಮೆರ್ತಿಗುಡ್ಡ ಚಾರಣಗಳನ್ನು ಹೊರತುಪಡಿಸಿ ಉಳಿದ ಚಾರಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಅರಣ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸದ ಸಂದರ್ಭ ಕುದುರೆಮುಖ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಮಾಹಿತಿ ನೀಡಿದರು.
ನೋಂದಣಿ ಕಡ್ಡಾಯ: ಚಾರಣಕ್ಕೆ ತೆರಳುವ ಎಲ್ಲರೂ ಮುಂಗಡವಾಗಿ ಅರಣ್ಯ ಇಲಾಖೆಯ ವೆಬ್‌ಸೈಟ್ ಅರಣ್ಯ ವಿಹಾರದಲ್ಲಿ ಆನ್‌ಲೈನ್ ನೋಂದಣಿ ಮಾಡಬೇಕು. ನೋಂದಣಿಯಲ್ಲಿ ವೈಯಕ್ತಿಕ ವಿವರ ಹಾಗೂ ತುರ್ತು ಸಂಪರ್ಕ ಮಾಹಿತಿ ದಾಖಲಿಸಬೇಕು. ಇದರಿಂದ ಅಗತ್ಯ ಸಂದರ್ಭ ರಕ್ಷಣಾ ಕಾರ್ಯಾಚರಣೆ ಸುಲಭವಾಗಲಿದೆ. ಪ್ರತಿದಿನ ಎಷ್ಟು ಮಂದಿಗೆ ಪ್ರವೇಶ ನೀಡಬೇಕು ಎಂಬುದನ್ನೂ ಇಲಾಖೆ ನಿಯಂತ್ರಿಸುತ್ತದೆ. ಇಲಾಖೆಗೆ ಈ ಚಾರಣ ಆದಾಯದ ಮೂಲವೂ ಆಗಿದೆ. ಸ್ಥಳೀಯರಿಗೆ ಉದ್ಯೋಗವಕಾಶವೂ ಲಭಿಸಿದೆ.
ಚಾರಣಿಗರ ಸಂಖ್ಯೆ ಹೆಚ್ಚಳ: ಕಳೆದ ವರ್ಷ ಪಶ್ಚಿಮ ಘಟ್ಟದ ಮೂರು ಸ್ಥಳಗಳಿಗೆ 56,866 ಚಾರಣಿಗರು ಭೇಟಿ ನೀಡಿದ್ದರು. ಗಂಗಡಿಕಲ್ಲು 10,096 ಚಾರಣಿಗರು ಭೇಟಿ ನೀಡಿ 46,72,575 ರೂ,. ಆದಾಯ ಲಭಿಸಿದೆ. ಕುರಿಂಜಾಲುಗೆ 13,422 ಚಾರಣಿಗರು, 63,33,125 ರೂ. ಆದಾಯ, ಕುದುರೆಮುಖಕ್ಕೆ 33,348 ಚಾರಣಿಗರು, 1,89,28,000 ರೂ. ಆದಾಯ ಸಂಗ್ರಹವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೊಸ ಎಸ್‌ಒಪಿ ಪ್ರಕಾರ ಪ್ರತಿ 10 ಚಾರಣಿಗರ ಜತೆಗೆ ಒಬ್ಬ ತರಬೇತಿ ಪಡೆದ ಗೈಡ್ ಇರುತ್ತಾರೆ. ತಂಡ ನಿಗದಿತ ಮಾರ್ಗದಲ್ಲೇ ಸಾಗುವಂತೆ ನೋಡಿಕೊಳ್ಳುವುದು, ಸದಸ್ಯರ ಹಾಜರಾತಿ ಹಾಗೂ ತುರ್ತು ಸಂದರ್ಭ ನೆರವು ಈ ಗೈಡ್‌ನ ಜವಾಬ್ದಾರಿ. ಟ್ರೆಕ್ಕಿಂಗ್ ಆರಂಭಕ್ಕೂ ಮುನ್ನ ಗೈಡ್‌ಗಳು ಮಾರ್ಗದ ಉದ್ದ, ಸಮಯ, ಅಪಾಯದ ಸ್ಥಳಗಳು, ಹವಾಮಾನದ ಸ್ಥಿತಿ ಹಾಗೂ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಮಾಹಿತಿ ನೀಡುತ್ತಾರೆ. ಸದಸ್ಯರು ಗುಂಪಿನಿಂದ ಪ್ರತ್ಯೇಕವಾಗದಂತೆ ವಿಶೇಷ ನಿಗಾ ವಹಿಸಲಾಗುತ್ತದೆ.
ವಾಕಿಟಾಕಿ ಸಂಪರ್ಕ ತ್ವರಿತ ನೆರವು
ಕುದುರೆಮುಖದ ಅನೇಕ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ವತಿಯಿಂದ ಗೈಡ್‌ಗಳಿಗೆ ವಾಕಿಟಾಕಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಮೂಲಕ ಬೇಸ್ ಕ್ಯಾಂಪ್ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಸಾಧ್ಯ. ಯಾರಾದರೂ ಗಾಯಗೊಂಡರೆ, ಆರೋಗ್ಯ ಸಮಸ್ಯೆ ಎದುರಾದರೆ ಅಥವಾ ಹವಾಮಾನ ಏಕಾಏಕಿ ಬದಲಾದರೆ ತಕ್ಷಣ ಮಾಹಿತಿ ರವಾನಿಸಿ ನೆರವು ಪಡೆಯುವ ವ್ಯವಸ್ಥೆ ಇದೆ. ಪ್ರತಿ ತಂಡದ ಗೈಡ್ ಬಳಿ ಪ್ರಥಮ ಚಿಕಿತ್ಸಾ ಕಿಟ್ ಇರುತ್ತದೆ. ಕಾಲು ಜಾರುವುದು, ಸಣ್ಣಪುಟ್ಟ ಗಾಯಗಳು, ಕೀಟಗಳ ಕಡಿತ ಅಥವಾ ದಣಿವಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸ್ಥಳದಲ್ಲೇ ಆರಂಭಿಕ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರ ಪರಿಸ್ಥಿತಿ ಎದುರಾದರೆ ರಕ್ಷಣಾ ತಂಡವನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಕುದುರೆಮುಖ ಫೌಂಡೇಶನ್‌ಗೆ 5.20 ಕೋಟಿ ರೂ. ಸಂಗ್ರಹ
‘ಕೂಡ್ಲುತೀರ್ಥ ಫಾಲ್ಸ್, ಕೊಡಚಾದ್ರಿ, ಕುದುರೆಮುಖ ಟ್ರೆಕ್ಕಿಂಗ್ ಹಾಗೂ ಬೆಳ್ತಂಗಡಿ ಗಡಾಯಿ ಕಲ್ಲು ಸೇರಿದಂತೆ 2025-26ನೇ ಸಾಲಿನಲ್ಲಿ ಕುದುರೆಮುಖ ಫೌಂಡೇಶನ್‌ಗೆ ಆನ್‌ಲೈನ್ ಮೂಲಕ ಚಾರಣಿಗರಿಂದ 5.20 ಕೋಟಿ ರೂ. ಸಂಗ್ರಹವಾಗಿದೆ. ಆ ಫೌಂಡೇಶನ್‌ಗೆ ಬಂದ ಹಣವನ್ನು ಪುನರ್ವಸತಿ, ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ಕ್ವಾರ್ಟಸ್ ಹಾಗೂ ಸಣ್ಣ ಪುಟ್ಟ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತದೆ. ಕುದುರೆಮುಖ ಆ್ಯಂಟಿ ಪೋಚಿಂಗ್ ಕ್ಯಾಂಪ್‌ನಡಿ 200 ಮಂದಿ ಯುವಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಎಸ್‌ಐ, ಇಪಿಎಫ್ ಜತೆಗೆ ರೇಶನ್ ಹಾಗೂ 16,700 ರೂ. ವೇತನವನ್ನು ಒದಗಿಸಲಾಗುತ್ತಿದೆ.’
ಪಿ.ಶ್ರೀಧರ್
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದಿರೆ
ಪರಿಸರಕ್ಕೂ ರಕ್ಷಣೆ
ಕುದುರೆಮುಖ ರಾಷ್ಟ್ರೀಯ ಉದ್ಯಾನ ಜೀವ ವೈವಿಧ್ಯತೆಯ ಅಮೂಲ್ಯ ತಾಣ. ಹೀಗಾಗಿ ಪ್ಲಾಸ್ಟಿಕ್ ಬಳಕೆ, ಕಸ ಎಸೆಯುವುದು, ಗದ್ದಲ, ಕ್ಯಾಂಪ್‌ಫೈರ್ ಹಾಗೂ ವನ್ಯಜೀವಿಗಳಿಗೆ ತೊಂದರೆ ಮಾಡುವ ಚಟುವಟಿಕೆಗಳಿಗೆ ನಿಬರ್ಂಧವಿದೆ. ಪ್ರವಾಸಿಗರು ತಂದ ತ್ಯಾಜ್ಯವನ್ನು ಮರಳಿ ತೆಗೆದುಕೊಂಡು ಹೋಗುವುದು ಕಡ್ಡಾಯ. ನಿಗದಿತ ಮಾರ್ಗ ಬಿಟ್ಟು ಅರಣ್ಯದೊಳಗೆ ಸಂಚಾರ ಇಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net