ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪರಿಸರ ಸೂಕ್ಷ್ಮವಲಯದ ಗಡಿ 1 ಕಿ.ಮೀ

forest
Published on

ಉಡುಪಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಪರಿಸರ ಸೂಕ್ಷ್ಮವಲಯದ ಗಡಿಯನ್ನು ರಾಷ್ಟ್ರೀಯ ಉದ್ಯಾನವನದ ಗಡಿಯಿಂದ 1 ಕಿ.ಮೀ.ಗೆ ಗುರುತಿಸಲಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ರುದ್ರನ್ ತಿಳಿಸಿದ್ದಾರೆ.

ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 3ರಂತೆ ಕೇಂದ್ರ ಅರಣ್ಯ ಪರಿಸರ ಸಚಿವಾಲಯ ಜುಲೈ 2ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದ ಗಡಿ ಗುರುತಿಸಿತ್ತು. ಈ ಉದ್ಯಾನವನ ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ನೈಸರ್ಗಿಕ ಪರಂಪರೆ ತಾಣ. ಮನುಷ್ಯ-ಪ್ರಾಣಿಗಳ ಸಂಘರ್ಷ ತಗ್ಗಿಸುವಿಕೆಗೆ ಸಹಾಯ ಮಾಡುವ ಪ್ರದೇಶಗಳಿಗೆ ಪರಿವರ್ತನಾ ವಲಯವಾಗಿ ಇದು ಕಾರ್ಯನಿರ್ವಹಿಸುತ್ತದೆ. ಪರಿಸರ ದುರ್ಬಲವಾಗಿರುವ ಪ್ರದೇಶಗಳನ್ನು ವಿವೇಚನೆಯಿಲ್ಲದ ಕೈಗಾರಿಕೀಕರಣದಿಂದ ಪರಿಸರ ರಕ್ಷಿಸುವ ಪ್ರಯತ್ನ. ಇದು ಸ್ಥಳೀಯ ಸಮುದಾಯಗಳ ಚಟುವಟಿಕೆಗಳಿಗೆ ವಿರುದ್ಧವಲ್ಲ. ವಲಯವನ್ನು ಕಂದಾಯ, ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ ಪರಿಸರ ವಿಜ್ಞಾನದಲ್ಲಿ ಪರಿಣಿತರು, ಎನ್‌ಜಿಒ ಮತ್ತು ಮೂಡಿಗೆರೆ, ಕಾರ್ಕಳ, ಬೆಳ್ತಂಗಡಿ ಮತ್ತು ಶೃಂಗೇರಿ ಕ್ಷೇತ್ರಗಳಿಂದ ಶಾಸಕಾಂಗ ಸಭೆಯ ಸದಸ್ಯರನ್ನು ಒಳಗೊಂಡ ಸಮಿತಿಯಿಂದ ಜನಸಾಮಾನ್ಯರೊಂದಿಗೆ ಚರ್ಚಿಸಿ ಜೋನಲ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ನಿರ್ವಹಣೆ ಮಾಡಲಾಗುತ್ತದೆ. ಸ್ಥಳೀಯರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರ ವಲಯದ ವ್ಯಾಪ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಹೊರಗೆ ಅಗತ್ಯವಿರುವ ಕನಿಷ್ಠ ಪ್ರದೇಶಕ್ಕೆ ಮಿತಿಗೊಳಿಸಿ ನಿರ್ವಹಣೆ ಮಾಡಲು ಅಧಿಸೂಚನೆ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯರಲ್ಲಿ ಅನಗತ್ಯ ಗೊಂದಲ: ಈ ಘೋಷಣೆಯಿಂದ ಭೂಮಿ ಮಾಲೀಕತ್ವ, ಕಂದಾಯ, ಪಟ್ಟಾ ಜಮೀನುಗಳು ಯಥಾಸ್ಥಿತಿಲ್ಲಿರುತ್ತವೆ. ವಲಯದೊಳಗಿನ ಜನರನ್ನು ಸ್ಥಳಾಂತರಿಸುವುದಿಲ್ಲ. ನಿಯಮಿತ ಚಟುವಟಿಕೆಗಳನ್ನು ನಿರ್ವಹಿಸಬಹುದು. ವಿದ್ಯುತ್ ಮಾರ್ಗ, ಕುಡಿಯುವ ನೀರಿನ ಪೈಪ್‌ಲೈನ್, ರಸ್ತೆ, ಸೇತುವೆ ಪರಿಸರ ಸೂಕ್ಷ್ಮವಲಯದ ನಿಷೇಧಿತ ಚಟುವಟಿಕೆಗಳಲ್ಲ. ಸ್ಥಳೀಯ ಸಮುದಾಯಗಳಿಂದ ಕೃಷಿ ಮತ್ತು ತೋಟಗಾರಿಕೆ ಪದ್ಧತಿಗಳಿಗೆ ನಿಷೇಧವಿಲ್ಲ. ಮಾನವ ಪ್ರಚೋದಿತ ಭೂಕುಸಿತಗಳಿಂದ ರಕ್ಷಣೆ, ವಾಯು ಮಾಲಿನ್ಯ, ನೀರು ಮತ್ತು ಮಣ್ಣಿನ ಮಾಲಿನ್ಯ ತಪ್ಪಿಸಲು ಸಹಾಯಕ. ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಹೊಸ ಸಾ ಮಿಲ್, ಮಾಲಿನ್ಯಕಾರಕ ಕೈಗಾರಿಕೆ, ಜಲವಿದ್ಯುತ್ ಸ್ಥಾವರಗಳ ಸ್ಥಾಪನೆ, ಕೈಗಾರಿಕಾ ಚಟುವಟಿಕೆ ಪರಿಸರ ಸೂಕ್ಷ್ಮವಲಯದಲ್ಲಿ ಚಟುವಟಿಕೆಗಳ ನಿಷೇಧಿತ ಪಟ್ಟಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net