

ಗಜೇಂದ್ರಗಡ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರ ಹಿತದೃಷ್ಟಿಯಿಂದ ಬೇರೆ ಬೇರೆ ಜಿಲ್ಲೆಯ, ರಾಜ್ಯಗಳ ತಂತ್ರಜ್ಞಾನವನ್ನು ಗಜೇಂದ್ರಗಡದಲ್ಲಿ ಅಳವಡಿಸಿ ಜನರ ಹಿತ ಕಾಪಾಡುತ್ತಿರುವ, ಜನಮನ್ನಣೆ ಹಾಗೂ ಪ್ರೀತಿ ಗಳಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಶಾಸಕ ಜಿ.ಎಸ್. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪೊಲೀಸ್ ಚೌಕಿ, ಟ್ರಾಫಿಕ್ ಸಿಗ್ನಲ್ ಹಾಗೂ ಸಿಸಿ ಕ್ಯಾಮರಾಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಯಿಪಲ್ಯೆ, ಹಣ್ಣು, ಹೂವು ವ್ಯಾಪಾರಸ್ಥರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗದ ಕೊರತೆ ಹೆಚ್ಚಾಗಿದೆ. ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ 40 ಎಕರೆ ಜಾಗದಲ್ಲಿ ನೂತನ ಮಾರುಕಟ್ಟೆ ನಿರ್ವಿುಸಲು ಶ್ರಮವಹಿಸಲಾಗುವುದು ಎಂದರು.
ಎಸ್ಪಿ ಬಿ.ಎಸ್. ನೇಮಗೌಡ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರ ಬಿಟ್ಟರೆ ಗಜೇಂದ್ರಗಡ ದೊಡ್ಡ ಪಟ್ಟಣವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಟ್ರಾಫಿಕ್ ಸಿಗ್ನಲ್, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಕಾಲಕಾಲೇಶ್ವರ ವೃತದಲ್ಲಿ ಪೊಲೀಸ್ ಚೌಕಿ ನಿರ್ವಿುಸಲಾಗಿದೆ. ಒಟ್ಟು 19 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪಟ್ಟಣದ ಇನ್ನು ಕೆಲವೆಡೆ ಶೀಘ್ರದಲ್ಲೇ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಟ್ರಾಫಿಕ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಹಾಗೂ ಸಂಚಾರಿ ನಿಯಮಗಳ ಅನುಷ್ಠಾನಕ್ಕೆ ಜನರ ಸಹಕಾರ ಅತ್ಯಗತ್ಯವಾಗಿ ಬೇಕು ಎಂದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಸಿದ್ದು ಬೀಳಗಿ, ಪಿಎಸೈ ಸೋಮನಗೌಡ ಗೌಡ್ರ, ಪುರಸಭೆ ವಿಪಕ್ಷನಾಯಕ ಮುರ್ತಜಾ ಡಾಲಾಯತ, ಸದಸ್ಯರಾದ ಶಿವರಾಜ ಘೊರ್ಪಡೆ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್ಲ, ಸಿದ್ದಣ್ಣ ಬಂಡಿ, ಚಂಬಣ್ಣ ಚವಡಿ, ಉಮೇಶ ರಾಠೋಡ, ಮಂಜುಳಾ ರೇವಡಿ, ಶ್ರೀಧರ ಬಿದರಳ್ಳಿ, ಶ್ರೀಧರ ಗಂಜಿಗೌಡ್ರ, ಸಿದ್ದು ಗೊಂಗಡಶೆಟ್ಟಿಮಠ, ಅಂದಪ್ಪ ರಾಠೋಡ, ಇತರರಿದ್ದರು.