

ಮೈಸೂರು:ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಿರಿಯ ಲೇಖಕ ಬನ್ನೂರು ಕೆ.ರಾಜು ಅವರನ್ನು ಅಭಿನಂದಿಸಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದ, ನಟರಾಜ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಶಿವರಾಜಪ್ಪ ಅವರು, ರಾಜು ಅವರು ಹಲವು ಕೃತಿಗಳನ್ನು ರಚಿಸಿ, ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಒಬ್ಬ ವ್ಯಕ್ತಿ ಎಂಬತ್ತು ವರ್ಷದಲ್ಲಿ ಸಮಾಜಕ್ಕೆ ಕೊಡಬೇಕಿರುವುದನ್ನು ಅವರು ಅರವತ್ತು ವರ್ಷದಲ್ಲಿಯೇ ಕೊಟ್ಟಿದ್ದಾರೆ. ಅವರಿಗೆ ಸಲ್ಲಬೇಕಾದ ತಕ್ಕ ಗೌರವ ಸಲ್ಲುತ್ತಿದೆ ಎಂದರು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬನ್ನೂರು ಕೆ.ರಾಜು ಹಾಗೂ ಅವರ ಪತ್ನಿ ಮಹಾಲಕ್ಷ್ಮಿಅವರನ್ನು ಅಭಿನಂದಿಸಿ, ಶುಭಕೋರಲಾಯಿತು. ಲೇಖಕಿ ಲೀಲಾ ಪ್ರಕಾಶ್, ನಟ ಸುಪ್ರೀತ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಮುಖಂಡರಾದ ಬಾಲಕೃಷ್ಣ, ಮೂಗೂರು ನಂಜುಂಡಸ್ವಾಮಿ, ಭಾಸ್ಕರ್, ಕ್ಯಾತನಹಳ್ಳಿ ಎಚ್.ಪ್ರಕಾಶ್, ವಿದ್ಯಾ, ಸುಮಾ ರಾಜ್ ಕುಮಾರ್ ಇತರರು ಇದ್ದರು.