

ಮಡಿಕೇರಿ: ನ್ಯಾಯಾಧೀಶರಾಗಿ ನೇಮಕಗೊಂಡ ಮಡಿಕೇರಿ ವಕೀಲರ ಸಂಘದ ಸದಸ್ಯ ಅಬು ತಾಹೀರ್‌ರವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ಯಾಂಪ್ರಸಾದ್, ನ್ಯಾಯಾಧೀಶರ ಸ್ಥಾನ ಅತ್ಯಂತ ಗೌರವ ಮತ್ತು ಪ್ರತಿಷ್ಟೆಯದ್ದಾಗಿದೆ. ನ್ಯಾಯದಾನ ನೀಡುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಎಂದು ಹಾರೈಸಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಅಬು ತಾಹೀರ್‌ರವರ ಸಾಧನೆ ಯುವವಕೀಲರಿಗೂ ಪ್ರೇರಣೆಯಾಗಲಿ. ಮತ್ತಷ್ಟು ಯುವ ವಕೀಲರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ, ಸಿವಿಲ್ ನ್ಯಾಯಾಧೀಶರಾದ ಮುನಿರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘಧ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜು, ವಕೀಲ ಟಿ.ಎಚ್.ಅಬೂಬಕರ್, ಸರ್ಕಾರಿ ಅಭಿಯೋಜಕರು, ವಕೀಲರ ಸಂಘದ ಸದಸ್ಯರು, ನ್ಯಾಯವಾದಿಗಳು ಹಾಜರಿದ್ದರು.