ಗೃಹರಕ್ಷಕಿ ಎಚ್.ಆರ್.ಪಲ್ಲವಿಗೆ ಅಭಿನಂದನೆ

athlet
Published on

ಮಡಿಕೇರಿ: ಬೆಂಗಳೂರಿನ ಆರ್.ಎ.ಮಂಡುಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಎಚ್.ಆರ್.ಪಲ್ಲವಿರವರು ೪೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಮತ್ತು ೧೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ನಾಗಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.


ವೈ.ಎನ್.ಕವನ್ ಕುಮಾರ್‌ರವರು ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಯಿಂದ ೪ ಗೃಹರಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಜ್ಯ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಜಯ ಸಾಧಿಸಿದ್ದಾರೆ.


ಎ.ಪಿ.ಜಯಕುಮಾರ್‌ರವರು ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ತರಬೇತಿ ಅಕಾಡೆಮಿಯಲ್ಲಿ ನಡೆದ ಅಡ್ವಾನ್ಸ್ ಪೈರ್ ಪೈಟಿಂಗ್ ತರಬೇತಿಯಲ್ಲಿ ಒಟ್ಟು ೬೦ ಗೃಹರಕ್ಷಕರಲ್ಲಿ ಪ್ರಥಮ ಸ್ಥಾನಪಡೆದಿರುತ್ತಾರೆ. ಮತ್ತು ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶೀಕ ತರಬೇತಿ ಕೇಂದ್ರ ದೇವರಬೆಳಕೆರೆ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದು ಕೊಡಗು ಜಿಲ್ಲೆಗೆ ಹೆಸರು ತಂದಿದ್ದಾರೆ.


ಈ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹರಕ್ಷಕ ದಳದ ಸಮಾದೇಷ್ಟರಾದ ಕೆ.ಎಸ್.ಸುಂದರರಾಜ್‌ರವರು ಗುರುವಾರ ಹೂಗುಚ್ಛ ನೀಡಿ ಅಭಿನಂದಿಸಿದರು. ಗೃಹರಕ್ಷಕ ದಳದ ಜಿಲ್ಲಾ ಬೋಧಕ ಡಿ.ಅಕ್ಷಯ್ ಕುಮಾರ್, ಗೃಹ ರಕ್ಷಕದಳದ ಎಂ.ವಿಶ್ವನಾಥ, ವಿ.ಜಿ.ನಿರ್ಮಲಾ, ಮಡಿಕೇರಿ ಘಟಕಾಧಿಕಾರಿ ವೈ.ಎನ್.ಕವನ್‌ಕುಮಾರ್ ಹಾಗೂ ಗೃಹರಕ್ಷಕ ವಿಭಾಗದ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net