

ಮಂಗಳೂರು: ಜಗತ್ತಿನ ದಾರ್ಶನಿಕರಲ್ಲಿ ಮುಂಚೂನಿಯಲ್ಲಿರುವ ವ್ಯಕ್ತಿತ್ವ ಕುದ್ಮುಲ್ ರಂಗರಾಯರದ್ದು. ಶೋಷಿತ ಸಮಾಜದ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಏಳಿಗೆಗಾಗಿ ತನ್ನನ್ನು ತಾನು ಸಮರ್ಪಿಸಿದ ಕುದ್ಮುಲ್ ರಂಗರಾಯರದ್ದು ಶ್ರೇಷ್ಠ ವ್ಯಕ್ತಿತ್ವ ಎಂದು ತುಳುನಾಡ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದರು.
ಕುದ್ಮುಲ್ ರಂಗರಾವ್ ಅವರ 97ನೇ ಪುಣ್ಯ ತಿಥಿ-ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಮಂಗಳೂರಿನ ಅಖಿಲ ಭಾರತ ಮುಂಡಾಲ ಯುವ ವೇದಿಕೆ, ಕುದ್ಮುಲ್ ರಂಗರಾವ್ ಎಜುಕೇಷನಲ್ ಟ್ರಸ್ಟ್ ಅತ್ತಾವರ, ಬಾಬುಗುಡ್ಡ ಹಾಗೂ ಚಳವಳಿ ಪ್ರಕಾಶನ ನಂಜನಗೂಡು ಮೈಸೂರು ಸಂಯುಕ್ತ ಆಶ್ರಯದಲ್ಲಿ ಗುರುವಾರ ಅತ್ತಾವರದಲ್ಲಿರುವ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದಲ್ಲಿ ಮೈಸೂರಿನ ಸಾಹಿತಿ ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ ಅವರ ‘ಶೋಷಿತರ ಬೆಳಕು ಕುದ್ಮುಲ್ ರಂಗರಾವ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜ ಸುಧಾರಣೆಯ ಹೋರಾಟದಲ್ಲಿ ಭಾರತವು ಹಲವು ಮಹನಿಯರನ್ನು ಕಂಡಿದೆ. ಆದರೆ ಶೋಷಿತರ ಉದ್ಧಾರಕ್ಕಾಗಿ ಹೋರಾಡಿದ ಮಹನೀಯರು ಕುದ್ಮುಲ್ ರಂಗ ರಾಯರ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳುವ ಅಗತ್ಯವಿದೆ. ಮೈಸೂರಿನ ಡಾ. ಮಹಾಲಿಂಗ ಕಲ್ಕುಂದ ಅವರು ರಾಯರ ಕುರಿತು ಅಧ್ಯಯನ ಮಾಡಿ ಬರೆದ ಕೃತಿ ಅವರ ಬದುಕಿನ ಕುರಿತು ಇನ್ನಷ್ಟು ಜನರಿಗೆ ಅರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಲಿದೆ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಕುದ್ಮುಲ್ ರಂಗರಾಯರು ಭಾರತೀಯ ಸಮಾಜದಲ್ಲಿ ಮೇಲುಕೀಳು ವ್ಯವಸ್ಥೆಯನ್ನು ಹೋಗಲಾಡಿಸಿ ಹಿಂದುಳಿದ ವರ್ಗ ಹಾಗೂ ದಲಿತರಿಗೆ ಸಾಮಾಜಿಕ ಬದುಕನ್ನು ನೀಡಿದವರು. ದಲಿತರಿಗೆ ಸ್ವಾಭಿಮಾನಿ ಬದುಕು ಚಿಂತನೆಗಳ ಅನುಷ್ಠಾನಕ್ಕೆ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಅನುಷ್ಠಾನ ಮಾಡಿ ತೋರಿಸಿದವರು ಎಂದರು.
ಲೇಖಕ ಅಣ್ಣು, ಕುದ್ಮುಲ್ ರಂಗರಾವ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಹೃದಯನಾಥ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಮಂಗಳೂರು ವಿವಿ ವಿಜ್ಞಾನ ಉಪಕರಣ ಕೇಂದ್ರ ಮುಖ್ಯಸ್ಥ ಎ.ಜಿ. ವಿವೇಕಾನಂದ, ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ ಪ್ರಾದೇಶೀಕ ನಿರ್ದೇಶಕ ಡಾ. ಬಿ. ಬಸವರಾಜು, ಪರಿಶಿಷ್ಠಜಾತಿ, ಪರಿಶಿಷ್ಠ ವರ್ಗಗಳ ಅಧ್ಯಯನ ಮತ್ತು ಅಭಿವೃದ್ದಿ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಾನಂದ, ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಸ್ಥೆ ಗೌರವಾಧ್ಯಕ್ಷ ದೇವೇಂದ್ರ ಕೆ., ಚಿಂತಕ ಭೂಪೇಶ್ ಪಾಲನ್, ಶಾಮ್ ಕರ್ಕೇರ, ಶಿವಪ್ಪ ನಂತೂರು, ರಘುವೀರ ಬಾಬುಗುಡ್ಡೆ, ರವಿ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.
ಕೃತಿಕಾರ ಡಾ. ಮಹಾಲಿಂಗ ಕಲ್ಕುಂದ ಅವರನ್ನು ಸಮ್ಮಾನಿಸಲಾಯಿತು. ಕಿರಣ್ ಕುಮಾರ್ ಕೊಡಿಯಾಲಬೈಲು ಸ್ವಾಗತಿಸಿದರು.
---------------
ಕುದ್ಮುಲ್ ರಂಗರಾಯರು ತಮ್ಮ ಸ್ವಂತಕ್ಕೆ ಯಾವುದನ್ನೂ ಇಟ್ಟು ಕೊಳ್ಳದೆ ಪರಿಶಿಷ್ಟ ಜಾತಿ ಬಂಧುಗಳನ್ನು ಮುಖ್ಯವಾಹಿನಿಗೆ ತರಲು ಕೆಲಸ ಮಾಡಿದವರು. ಅವರ ಕೊಡುಗೆಗಳ ಎದುರು ನಮ್ಮ ಕೊಡುಗೆ ಕಡಿಮೆ ಎನ್ನುವ ಭಾವನೆ ಮೂಡುತ್ತದೆ. ಅಸ್ಪೃಶ್ಯತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಷ್ಟ ನೋವುಗಳನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರ ಪ್ರಯತ್ನಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.
-ಡಿ.ವೇದವ್ಯಾಸ ಕಾಮತ್, ಶಾಸಕ