

ಕುಶಾಲನಗರ: ವಿದ್ಯಾರ್ಥಿಗಳ ನಡಿಗೆ ಕೃಷಿಯೆಡೆಗೆ ಎಂಬ ಘೋಷ ವಾಕ್ಯದೊಂದಿಗೆ ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿದಂಡೆಯ ಮೇಲಿನ ಹಸಿರು ಪರಿಸರದ ಮಧ್ಯೆ ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಜನಪದ ಸಂಸ್ಕೃತಿಯ ಪ್ರತೀಕವಾದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು.
ಉತ್ತರ ಕೊಡಗಿನ ಕುಶಾಲನಗರ ತಾಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಎಸ್.ಡಿ.ಎಂ.ಸಿ ವಿದ್ಯಾರ್ಥಿ ಸಂಘ, ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆ, ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್‌ನ ಸಹಯೋಗದೊಂದಿಗೆ ೭೯ನೇ ಸ್ವಾತಂತ್ರ್ಯೋತ್ಸವ ಹಾಗೂ ಗೋ ಗ್ರೀನ್ ಅಭಿಯಾನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಳೆಯ ಸಿಂಚನದೊಂದಿಗೆ ಆಗಾಗ್ಗೆ ಬಿಸಿಲಿನ ವಾತಾವರಣದಲ್ಲಿ ವಿದ್ಯಾರ್ಥಿಗಳು ಗದ್ದೆಯ ಕೆಸರಿನಲ್ಲಿ ಮಿಂದು ಎದ್ದು ಕೆಸರು ಮಣ್ಣಿನ ಸ್ಪರ್ಶ ಅನುಭವ ಪಡೆದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಇಂತಹ ಕ್ರೀಡಾಕೂಟ ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮತ್ತು ಶಿಕ್ಷಕರ ಪ್ರೇರೇಪಣೆ ಮತ್ತು ಕಾರ್ಯಕ್ಷಮತೆಯು ಅನುಕರಣೀಯವಾದುದು. ಇದರಿಂದ ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರೈತ ದೇಶದ ಬೆನ್ನೆಲಬು. ರೈತರ ಜೀವನಕ್ರಮ, ರೈತರು ಕೃಷಿ ಕಾರ್ಯದಲ್ಲಿ ಎದುರಿಸುವ ಕಷ್ಟ-ಕಾರ್ಪಣ್ಯಗಳು, ರೈತರ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸ್ವತಃ ಅನುಭವ ಪಡೆಯಲು ಇಂತಹ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಬೇಬಿಮ್ಯಾಥ್ಯೂ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಕುಶಾಲನಗರ ಸ್ಣಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಈ ಕ್ರೀಡೆಯ ಮೂಲಕ ಶಾಲಾ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಈ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಗ್ರಾಮೀಣ ಭಾಗದ ಮಣ್ಣಿನ ಪರಿಮಳವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಸರುಗದ್ದೆ ಕ್ರೀಡೆಯು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದರು.
ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ, ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷ ಕೆ.ಎನ್.ಪವನ್ ಮಾತನಾಡಿ, ಶಾಲೆಯ ಹೊರಾಂಗಣದ ಪರಿಸರದಲ್ಲಿ ಇಂತಹ ಚಟುವಟಿಕೆಗಳಿಗೆ ಗ್ರಾಮದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಇಂತಹ ಕ್ರೀಡಾಕೂಟವನ್ನು ನಿರಂತರವಾಗಿ ಮುಂದುವರೆಸಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪ್ರಗತಿ ಪರ ಕೃಷಿಕ ಕೆ.ಎಸ್.ರಾಜಾಚಾರಿ, ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕಿ ಎಂ.ಲತಾ, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್ ಹಂಡ್ರಂಗಿ ಮಾತನಾಡಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎನ್.ಟಿ.ನಾರಾಯಣ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಎಂ.ಎನ್.ಮೂರ್ತಿ, ಸ್ಕೌಟ್ಸ್, ಕುಶಾಲನಗರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎನ್.ಟಿ.ನಾರಾಯಣ್, ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್, ಕಾರ್ಯದರ್ಶಿ ಸದಸ್ಯರಾದ ಸುಮನ್, ಕೊಡಗನ ಹರ್ಷ, ಸತೀಶ್, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಕೃಷಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.