

ಕೂಡ್ಲಿಗಿ: ಮಾದಕ ವಸ್ತುಗಳ ಸೇವನೆ ಮಾಡುವವರು ಕಾಯಿಲೆಗಳಿಗೆ ತುತ್ತಾಗಿ ಆರ್ಥಿಕ ನಷ್ಟ ಅನುಭವಿಸಿ ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಯುಕರು ಜಾಗೃತರಾಗಬೇಕು ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ದುಶ್ಚಟಗಳಿಗೆ ಹೆಚ್ಚಾಗಿ ಯುವಕರು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಣೆ ಕಾನೂನಬಾಹಿರ ಎಂದು ತಿಳಿದಿದ್ದರೂ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ವಿಶ್ವದೆಲ್ಲೆಡೆ ಕಾನೂನಿನ ಮೂಲಕ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರೂ ಈ ಕುರಿತು ಜಾಗೃತರಾಗಿ ಮಾದಕವಸ್ತು ಮುಕ್ತ ಸಮಾಜ ನಿರ್ಮಿಸಬೇಕಿದೆ ಎಂದು ತಿಳಿಸಿದರು.
ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿ, ಪಿಎಸ್‌ಐ ಸಿ.ಪ್ರಕಾಶ್, ಪ್ರಾಚಾರ್ಯೆ ಟಿ.ಕೊತ್ಲಮ್ಮ, ಉಪನ್ಯಾಸಕರಾದ ರಾಜಭಕ್ಷಿ, ಎನ್.ಸುಮಾ, ಕೆ.ಎಚ್.ಎಂ.ಕೊಟ್ರಮ್ಮ, ಚಾಂದ್ ಪೀರಾ, ಮಹಾಂತೇಶ, ಕೆ.ನಾಗರಾಜ, ಟಿ.ರಾಘವೇಂದ್ರ, ಕೊಟ್ರೇಶ್, ಏಕಾಂತಪ್ಪ ಇತರರಿದ್ದರು.