ಶ್ರದ್ಧೆ, ಭಕ್ತಿಯ ಉಪಾಸನೆಯಿಂದ ಫಲ - ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ

ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಶುಕ್ರವಾರ ನೂತನ ದೇವಸ್ಥಾನಗಳ ಬಿಡುಗಡೆ ನಿಮಿತ್ತ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಮಹಾಸ್ವಾಮಿ ಅಡ್ಡಪಲ್ಲಕ್ಕಿ ಕಾರ್ಯಕ್ರಮ ಜರುಗಿತು.
ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಶುಕ್ರವಾರ ನೂತನ ದೇವಸ್ಥಾನಗಳ ಬಿಡುಗಡೆ ನಿಮಿತ್ತ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಮಹಾಸ್ವಾಮಿ ಅಡ್ಡಪಲ್ಲಕ್ಕಿ ಕಾರ್ಯಕ್ರಮ ಜರುಗಿತು.
Published on

ಕೂಡ್ಲಿಗಿ: ಮಾನವ ಕುಲ ಶ್ರೇಷ್ಠವಾಗಿದ್ದು, ಇದಕ್ಕೆ ಜಾತಿಯ ಬಣ್ಣ ಸಲ್ಲದು ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ವಿರುಪಾಪೂರ ಗ್ರಾಮದಲ್ಲಿ ಬಸವಲಿಂಗೇಶ್ವರ ಮತ್ತು ಮಲಿಯಮ್ಮ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಆಂಜನೇಯ ದೇವಸ್ಥಾನ ಕಳಸಾರೋಹಣ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಶುಕ್ರವಾರ ಮಾತನಾಡಿದರು.

ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ಇಲ್ಲಿ ಅನೇಕ ದೇವರುಗಳನ್ನು ವಿಭಿನ್ನ ಸಂಸ್ಕೃತಿಯ ತಳಹದಿಯಲ್ಲಿ ನಾವುಗಳು ಪೂಜೆ ಮಾಡುತ್ತೇವೆ. ಆದರೆ, ಉಪಾಸನೆ ಮಾಡುವಾಗ ಭಕ್ತಿ, ಶ್ರದ್ಧೆಯಿಂದ ಮಾಡಿದಲ್ಲಿ ಫಲ ದೊರೆಯುತ್ತದೆ ಪ್ರಸ್ತುತ ಜೀವನದಲ್ಲಿ ಜಾತಿ ಸಂಘರ್ಷಗಳು ಅತಿಯಾಗಿ ನಡೆಯುತ್ತಿದ್ದು, ಕ್ಷುಲ್ಲಕ ಕಾರಣಗಳಿಗೆ ಜಾತಿ ಲೇಪನ ಹಚ್ಚಿ ಕಲಹಗಳನ್ನು ಮಾಡದೇ ಮಾನವ ಕುಲ ಒಂದೇ, ಇಲ್ಲಿ ಮೇಲು-ಕೀಳು ಮಾಡದೇ ಎಲ್ಲರೂ ಪರಸ್ಪರ ಭಾವೈಕ್ಯತೆಯಿಂದ ಜೀವಿಸಬೇಕು. ಎಲ್ಲ ಧರ್ಮಿಯ ದೇವರುಗಳ ತತ್ವಗಳು ಒಂದೇ. ವಿವಿಧತೆಯಲ್ಲಿ ಏಕತೆ ಇರುವ ಭಾರತೀಯ ಸಂಸ್ಕೃತಿಯನ್ನು ಮುಂದುವರಿದ ಅನೇಕ ರಾಷ್ಟ್ರಗಳು ಅನುಸರಿಸುತ್ತಿವೆ. ಆದ್ದರಿಂದ ನಾವು ಸನಾತನ ಧರ್ಮದ ತಳಹದಿಯ ಮೇಲೆ ನಮ್ಮ ಬದುಕನ್ನು ರೂಪಿಸಕೊಳ್ಳಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮದ ದ್ವಾರ ಬಾಗಿಲಿನಿಂದ ದೇವಸ್ಥಾನದವರೆಗೆ ಉಜ್ಜಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವೃತ್ತ ಉದ್ಘಾಟಿಸಲಾಯಿತು. ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣದ ನಿಮಿತ್ತ ವಿಶೇಷ ಪೂಜೆ ನೆರವೇರಿದವು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿರುಪಾಪುರ, ಅಮ್ಮನಕೇರಿ, ಮೊರಬ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net