

ಕೂಡ್ಲಿಗಿ: ಮೀಸಲಾತಿಗಾಗಿ ಎಸ್ಟಿ ಸಮುದಾಯಕ್ಕೆ ಮೇಲ್ವರ್ಗದ ಕುರುಬ ಸಮಾಜವನ್ನು ಸೇರ್ಪಡೆ ಮಾಡುವ ಹುನ್ನಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಡಬೇಕು. ಇಲ್ಲದಿದ್ದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಹಿಷ್ಕಾರ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಸುರೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ಎಸ್ಟಿ ಇಲಾಖೆ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬುಡಕಟ್ಟು ಸಂಸ್ಕೃತಿಯ ವಾಲ್ಮೀಕಿ ಸಮಾಜವು ಅತಿ ಹಿಂದುಳಿದಿದೆ. ಮೀಸಲಾತಿ ಅವಕಾಶವನ್ನು ಸಂವಿಧಾನದ ಅಡಿಯಲ್ಲಿ ಅಂಬೇಡ್ಕರ್ ನೀಡಿದ್ದು, ಈಗ ಮೇಲ್ವರ್ಗದ ಕುರುಬ ಸಮಾಜವನ್ನು ಸೇರ್ಪಡೆ ಮಾಡುವುದು ಅತ್ಯಂತ ದುರದೃಷ್ಟಕರ. ಈ ಬಗ್ಗೆ ಎಸ್ಟಿ ಸಮಾಜವು ರಾಜ್ಯಾದ್ಯಂತ ಪ್ರತಿಭಟಿಸುವ ಮೂಲಕ ಈ ಬಾರಿ ಸರ್ಕಾರಿ ಕಾರ್ಯಕ್ರಮವಾದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು. ನಂತರ ಎಲ್ಲ ವಾಲ್ಮೀಕಿ ಮುಖಂಡರು ಸಭೆಯನ್ನು ಬಹಿಷ್ಕಾರ ಹಾಕಿ ಹೊರ ನಡೆದರು. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ನಾಗಮಣಿ ಜಿಂಕಾಲ್, ಮುಖಂಡರಾದ ಸಿ.ಬಿ.ಜಯರಾಂ ನಾಯಕ, ಸಿರಬಿ ಮಂಜುನಾಥ, ಬಿ.ಕೆ.ರಾಘವೇಂದ್ರ, ಬಾಣದ ಮೂರ್ತಿ, ವೆಂಕಟೇಶ, ಶಂಕರ್ ಇತರರಿದ್ದರು.
ಇದನ್ನೂ ಓದಿ: ಮತ್ತೆ ಕಂಡ ‘ಕತ್ತೆ ಕುರುಬ’
ಸರ್ಕಾರದಿಂದ ಆಚರಣೆ
ವಾಲ್ಮೀಕಿ ಸಮಾಜದ ಜಯಂತಿ ಬಹಿಷ್ಕಾರದ ನಂತರ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅಧ್ಯಕ್ಷತೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಯಿತು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಅ.7 ರಂದು ತಾಲೂಕು ಆಡಳಿತ ಹಾಗೂ ಎಸ್ಟಿ ಇಲಾಖೆ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಬೆಳಗ್ಗೆ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಮಾಡಿ, ಅಲಂಕೃತ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಸಕಲ ಮಂಗಲ ವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ಮುಖ್ಯ ಭಾಷಣಕಾರರನ್ನು ಆಹ್ವಾನಿಸಿ ಮಹರ್ಷಿ ವಾಲ್ಮೀಕಿಯವರ ಕೊಡುಗೆ ಹಾಗೂ ಆದರ್ಶಗಳ ಬಗ್ಗೆ ತಿಳಿಸಲಾಗುವುದು. ವಾಲ್ಮೀಕಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ವೆಂಕಟೇಶ, ತಾಪಂ ಇಒ ನರಸಪ್ಪ, ಸಿಪಿಐ ಪ್ರಲ್ಹಾದ್ ಚನ್ನಗಿರಿ, ಎಸ್ಟಿ ಅಧಿಕಾರಿ ಮೆಹಬೂಬ್ ಭಾಷ ಹಾಗೂ ಅರಸೀಕೆರೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.