

ಕೂಡ್ಲಿಗಿ: ಯುವಕ, ಯುವತಿಯರು ಕೀಳರಿಮೆ ಬಿಟ್ಟು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ದೇಶದ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಲಯದಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಮತ್ತು ಶ್ರೀ ಸಿದ್ಧಲಿಂಗೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತಾನಾಡಿದರು.
ದೇಶದ ನಿರುದ್ಯೋಗಿ ಯುವಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾಕ್ಕೆ ಚಾಲನೆ ನೀಡಿದರು. ಇದರಿಂದ ದೇಶದಲ್ಲಿ ಉದ್ಯೋಗ ಹೆಚ್ಚಾಗುತ್ತದೆ, ಬಡತನ ಕಡಿಮೆಯಾಗುತ್ತದೆ. ಹೊಸ ಬಂಡವಾಳಗಾರರು ಬಂದು ಹೂಡಿಕೆ ಮಾಡುವುದರಿಂದ ದೇಶದ ಹೆಸರು ಹೊರ ದೇಶಗಳಿಗೆ ಪ್ರಚಾರವಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಜನರನ್ನು ಸುಶಿಕ್ಷಿತರನ್ನಾಗಿಸಿದ್ದೇನೆ. ಅದರ ಜತೆ ರೈತರಿಗೆ ನೀರಾವರಿ ಯೋಜನೆ ತಂದು 74 ಕೆರೆಗಳಿಗೆ ಜೀವಜಲ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜು, ಸ್ಥಳೀಯ ನಿರುದ್ಯೋಗಿ ಯುವಕ, ಯುವತಿಯರ ಔದ್ಯೋಗಿಕಿರಣಕ್ಕೆ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು, ಒಂದು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಅದರ ಮೂಲಕ ತರಬೇತಿ ನೀಡಿ ಉದ್ಯೋಗ ಒದಗಿಸುವುದಾಗಿ ತಿಳಿಸಿದರು.
ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನ ಗೌಡ ಪಾಟೀಲ್, ಶ್ರೀ ಸಿದ್ಧಲಿಂಗೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಮಾತಾನಾಡಿದರು. ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ನಿರ್ದೇಶಕ ಬಸವರಾಜಪ್ಪ, ಮುಖಂಡರಾದ ಎಸ್.ಪಿ.ಪ್ರಕಾಶ್, ಪಪಂ ಸದಸ್ಯ ಪಿ.ಚಂದ್ರು, ಬಿ.ಭೀಮೇಶ್, ಪಾಪನಾಯಕ, ಪಿ.ಮಂಜುನಾಥ ನಾಯಕ, ನಾರಯಣಿ, ಪವಿತ್ರಾ ಇದ್ದರು.
30 ಖಾಸಗಿ ಕಂಪನಿಯಗಳು ಮೇಳದಲ್ಲಿ ಪಾಲ್ಗೊಂಡಿದ್ದವು. 450ಕ್ಕೂ ಹೆಚ್ಚು ಯುವಕ, ಯುವತಿಯರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.