ಕಳಪೆಯಾಗಿವೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳು

19kudligi1
Published on

ಕೂಡ್ಲಿಗಿ ಪಪಂ ವಿಶೇಷ ಸಭೆಯಲ್ಲಿ ಸದಸ್ಯರ ಆರೋಪ

ಗುತ್ತಿಗೆದಾರರಿಗೆ ತಾಕೀತು ಮಾಡುವೆ ಎಂದ ಮುಖ್ಯಾಧಿಕಾರಿ


ಕೂಡ್ಲಿಗಿ: ಪಟ್ಟಣದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಳ್ಳುತ್ತಿರುವ ಮನೆಗಳು ಕಳಪೆಯಾಗಿದ್ದು ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯ ಕಾಲ್ಚೆಟ್ಟಿ ಈಶಪ್ಪ ಒತ್ತಾಯಿಸಿದರು.

ಪಟ್ಟಣದ ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುರ್ತುಸಭೆಯಲ್ಲಿ ಮಾತಾನಾಡಿದರು. ಈಗಾಗಲೇ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸುಮಾರು 700ಕ್ಕೂ ಹೆಚ್ಚು ಮನೆಗಳ ನಿರ್ಮಾಣ ನಡೆಯುತ್ತಿದೆ. ಆದರೆ, ಉಪಯೋಗಿಸುತ್ತಿರುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿಲ್ಲ. ಮನೆಯ ಮೆಟ್ಟಿಲುಗಳು, ವಿದ್ಯುತ್ ಸಂಒರ್ಕ, ನೀರಿನ ಸೌಲಭ್ಯ ಒದಗಿಸಿಲ್ಲ. ಇವು ತಮಗೆ ಸಂಬಂಧಿಸಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂಬ ದೂರು ಬಂದಿವೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿ ಗಮನಿಸಿ ಫಲಾನುಭವಿಗಳಿಗೆ ನ್ಯಾಯಕೊಡಿಸಬೇಕು ಎಂದು ತಾಕೀತು ಮಾಡಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ಮಾತಾನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಯುಜಿಡಿ ಕಾಮಗಾರಿ ದೋಷಯುಕ್ತವಾಗಿದೆ. ಸಂಪರ್ಕ ಪಡೆಯಲು ಜನರಿಗೆ ತಿಳಿಸಿದ್ದೀರಿ. ಆದರೆ, ಪೈಪ್‌ಗಳು ತುಂಬಿ ಹರಿಯುತ್ತಿವೆ. ಗಬ್ಬುವಾಸನೆ ಬರುತ್ತಿದೆ. ಆದರೂ ತೆರವುಗೊಳಿಸಲು ಯಾರೂ ಮುಂದಾಗುತ್ತಿಲ್ಲ. ಯುಜಿಡಿ ಅಧಿಕಾರಿಗಳು ತಮಗೆ ಸಂಬಂಧವಿಲ್ಲ ಎನ್ನುತ್ತಾರೆ. ಹೀಗಾದರೆ ಸಾರ್ವಜನಿಕರ ಪರಿಸ್ಥಿತಿ ಕೇಳುವವರು ಯಾರು ಎಂದು ಜಿ.ಲಕ್ಷ್ಮೀದೇವಿ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಪಟ್ಟಣದಲ್ಲಿ 15 ದಿನಗಳಿಂದ ಸರ್ಮಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಐದು ದಿನಗಳಿಗೊಮ್ಮೆ ನೀರು ಬರುತ್ತಿದೆ ವಾರ್ಡ್ ಗಳಲ್ಲಿ ಜನರು ಸದಸ್ಯರನ್ನೂ ಬಯ್ಯುತ್ತಿದ್ದಾರೆ ಎಂದು ಪಿ.ಚಂದ್ರು, ಈಶಪ್ಪ, ಸಯ್ಯದ್ ಶುಕೂರ್ ಆರೋಪಿಸಿದರು. ಹಗರಿ ಬೊಮ್ಮನಹಳ್ಳಿ ಬಳಿಯ ಜಾಕ್‌ವೆಲ್‌ನಿಂದ ನೀರು ಲಿಫ್ಟ್ ಆಗಬೇಕಿದ್ದು, ಅಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಪಟ್ಟಣದ ಈ ಹಿಂದಿನ ನೀರು ಶೇಖರಣ ಟ್ಯಾಂಕ್ ಗಳಿಂದ ನೀರು ಸರಬರಾಜು ಮಾಡಲಾಗುವುದು. ಜತೆಗೆ ಸದಸ್ಯರ ನಿಯೋಗ ಸಮೇತ ಜಾಕ್‌ವೆಲ್ ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಪಟ್ಟಣದಲ್ಲಿ ಹಂದಿಗಳ ಹಾವಳಿ ದಿನೇ ದಿನೆ ಹೆಚ್ಚಾಗಿದ್ದು, 6ನೇ ವಾರ್ಡ್ ಮತ್ತಿತರ ಕಡೆ ಹಂದಿಗಳ ಸಾಕಣೆ ನಡೆಯುತ್ತಿದೆ. ಸುತ್ತಲಿನ ಮನೆಗಳಿಗೆ ವಾಸನೆ ಹಬ್ಬುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಈಶಪ್ಪ, ತಳಸಾ ವೆಂಕಟೇಶ್, ಬಂಗಾರು ಹುಲಿಗೆಮ್ಮ ಒತ್ತಾಯಿಸಿದರು. ಹಂದಿ ಹಿಡಿಯುವರನ್ನು ಕರೆಯಿಸಿ, ಅವುಗಳನ್ನು ಬೇರೆಡೆ ಸಾಗಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಚರ್ಚೆ ಮುಗಿದ ನಂತರ ಮೂರು ತಿಂಗಳ ಜಮಾ ಮತ್ತು ಖರ್ಚಿನ ಲೆಕ್ಕದ ವಿವರವನ್ನು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net