

ಕೂಡ್ಲಿಗಿ: ಸುಂದರ ಹಾಗೂ ಸ್ವಚ್ಛ ಪಟ್ಟಣ ನಿರ್ಮಾಣದೊಂದಿಗೆ ಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಮನವಿ ಮಾಡಿದರು.
ಇಲ್ಲಿನ ಪಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪಟ್ಟಣದ 20 ವಾರ್ಡ್‌ಗಳಲ್ಲಿ ಮೊದಲ ಆದ್ಯತೆಯಾಗಿ ಕುಡಿವ ನೀರು, ಸ್ವಚ್ಛತೆ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಜನರ ನಿರೀಕ್ಷೆಯಂತೆ ಸದಸ್ಯರು ಹಾಗೂ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಈಗಾಗಲೇ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು 24 ತಾಸು ಕುಡಿವ ನೀರು ಪೂರೈಸಲು ಪಾವಗಡ ಕುಡಿವ ನೀರಿನ ಯೋಜನೆಗೆ ಕೂಡ್ಲಿಗಿ ಪಟ್ಟಣ ಒಳಪಡಿಸಿದ್ದು ಸಂತಸದ ವಿಷಯ. ಅಲ್ಲದೆ ಯುಜಿಡಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಒದಗಿಸಿದ್ದು, ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಪಿ.ಚಂದ್ರು ಮಾತನಾಡಿ, ಕಳೆದ ಸಭೆಯಲ್ಲಿ ಚರ್ಚೆ ಮಾಡಿದಂತೆ ಪಟ್ಟಣದ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 7.30 ಎಕರೆ ಜಮೀನು ನೀಡಿದ ದಾನಿಗಳ ಪುತ್ಥಳಿ ನಿರ್ಮಾಣಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದರು. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಪ್ರತಿಕ್ರಿಯಿಸಿ, ನಾನು ಹೊಸದಾಗಿ ಬಂದಿದ್ದು, ಹಿಂದಿನ ಕಡತ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ತಿಳಿಸಿದರು. ಕಾವಲಿ ಶಿವಪ್ಪನಾಯಕ ಧ್ವನಿಗೂಡಿಸಿ ದಾನಿಗಳ ಪುತ್ಥಳಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಆದಷ್ಟು ಬೇಗ ಅನುದಾನ ವಿತರಿಸಬೇಕು ಎಂದು ತಿಳಿಸಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕಲು ಪಿ.ಚಂದ್ರು ಒತ್ತಾಯಿಸಿದರು. ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ನಾಯಿಗಳ ಉಪಟಳ ತಪ್ಪಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಶುದ್ಧ ಕುಡಿವ ನೀರಿನ ಘಟಕ ಹಾಗೂ ಯುಜಿಡಿ ನಿರ್ವಹಣೆ ಸೇರಿ ನೀರು ಸರಬರಾಜು ಮಾಡುವ ಹೊರ ಗುತ್ತಿಗೆ ನೌಕರರಿಗೆ ವೇತನ ನೀಡಲು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಸೈಯದ್ ಶುಕೂರ್ ಅವರನ್ನು ಆಯ್ಕೆ ಮಾಡಲಾಯಿತು. ಪಪಂ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ, ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಲ್ಲಿಕಾರ್ಜುನ ಪಾಟೀಲ್, ಸದಸ್ಯರಾದ ಲಕ್ಷ್ಮೀದೇವಿ, ಡಾಣಿ ಚೌಡಮ್ಮ, ಸರಸ್ವತಿ ರಮೇಶ್, ಪೂರ್ಯಾ ನಾಯ್ಕ ಇತರರಿದ್ದರು.