

ಕೂಡ್ಲಿಗಿ: ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ದೇಶದ ಜಯಂತಿಯನ್ನು ತಾಲೂಕು ಆಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ತ್ರಿವರ್ಣ ಹೂವಿನ ಅಲಂಕಾರ ಮಾಡಲಾಗುವುದು.
ಬೆಳಗ್ಗೆ 9 ಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಾಗೂ ಅಧಿಕಾರಿಗಳು ಗಾಂಧಿ ಚಿತಾಭಸ್ಮಕ್ಕೆ ಪುಷ್ಪ ನಮನ ಸಲ್ಲಿಸುವರು. ನಂತರ ಗಾಂಧಿ ಹಾಗೂ ಶಾಸ್ತ್ರಿ ಕುರಿತು ಉಪನ್ಯಾಸ ನಡೆಯಲಿದೆ.
ಅ.2 ರಂದು ತಾಲೂಕಿನ ಎಲ್ಲ ಶಾಲಾ-ಕಾಲೇಜು ಹಾಗೂ ಗ್ರಾಪಂ ಕಚೇರಿಯಲ್ಲಿ ಇಬ್ಬರೂ ಮಹನೀಯರ ಫೋಟೋಗಳಿಗೆ ಪೂಜೆ ಸಲ್ಲಿಸಿ ಅವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.
ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ಬಿಇಒ ಎಸ್.ಎಸ್.ಜಗದೀಶ್, ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಜಿಲಾನ್ ಇತರರಿದ್ದರು.