

ಕೂಡ್ಲಿಗಿ: ಇತ್ತೀಚೆಗೆ ನಿಧನರಾದ ರಂಗನಟಿ ಬಾಣದ ಶಿವಕುಮಾರಿ ಹಾಗೂ ಉದ್ಯಮಿ, ಸಮಾಜ ಸೇವಕ ಆರ್.ಕೆ.ಶೆಟ್ಟಿ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸಾಪ ತಾಲೂಕು ಘಟಕದಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ ಮಾತನಾಡಿ, ರಂಗ ಕಲಾವಿದರ ತವರೂರಾದ ಕೂಡ್ಲಿಗಿ ತಾಲೂಕಿನ ರಂಗನಟಿ ಶಿವಕುಮಾರಿ 40 ವರ್ಷ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಗ್ರಾಮಿಣ ಪ್ರತಿಭೆ ನಾಡಿನುದ್ದಕ್ಕೂ ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಕಾರಣ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಸದಸ್ಯೆ ಸ್ಥಾನ ಅರಸಿ ಬಂತು. ಇವರ ಕಲೆ ಮೆಚ್ಚಿದ ಪಕ್ಕದ ಆಂಧ್ರ ಸರ್ಕಾರ ಕೊಡಮಾಡುವ ನಂದಿ ಪ್ರಶಸ್ತಿಗೂ ಭಾಜನರಾಗಿದ್ದರು.
ಇದನ್ನೂ ಓದಿ: ಕಸಾಪ ದಿಂದ ‘ಪುಸ್ತಕ ಉತ್ಸವ : ಡಾ. ಮಹೇಶ ಜೋಶಿ
ಇನ್ನು ಓದಿದ್ದು ಮೂರನೇ ತರಗತಿಯಾಗಿದ್ದರೂ ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿದ ಆರ್.ಕೆ.ಶೆಟ್ಟಿ ಅವರು, ಪಟ್ಟಣದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಬಡ ವಿದ್ಯಾರ್ಥಿಗಳಿಗೆ ನೆರವಾದರು.
ಚಿಂತನಾ ಸಾಹಿತ್ಯ ಬಳಗ ಹಾಗೂ ಕನ್ನಡ ಮಿತ್ರ ಸಂಘಗಳ ಅಧ್ಯಕ್ಷರಾಗಿ ಅನೇಕ ಸಾಹಿತ್ಯ ಚಟುವಟಿಕೆ ನಡೆಸಿದರು. ಕನ್ನಡ ಭವನ ನಿರ್ಮಾಣಕ್ಕೆ ಲಕ್ಷಾಂತರ ರೂ. ಬೆಲೆ ಬಾಳುವ ನಿವೇಶನ ದಾನವಾಗಿ ನೀಡಿದರು.
ಈ ಇಬ್ಬರು ಸಾಧಕರ ಸೇವೆ ಸ್ಮರಣೀಯ ಎಂದರು. ಹಿರಿಯ ನಾಟಕಕಾರ ಎನ್.ಎಂ.ರವಿಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದಾರಾಧ್ಯ ಇದ್ದರು.