

ಕೂಡ್ಲಿಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕರಿಗೆ ಮಾಸಾಶನ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಸಂಸ್ಥೆಯ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.
ಸಂಸ್ಥೆಯ ವಾತ್ಸಲ್ಯ ಯೋಜನೆಯಡಿ ತಾಲೂಕಿನ ಜುಮ್ಮೋಬನಹಳ್ಳಿ ಗುರುಮೂರ್ತಿ ಕುಟುಂಬಕ್ಕೆ ಮಂಜೂರಾದ ಮನೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಯಡಿ ಅಂದಾಜು ಸಾವಿರಾರು ಫಲಾನುಭವಿಗಳಿಗೆ ಪ್ರತಿ ತಿಂಗಳು 750 ರಿಂದ 1 ಸಾವಿರದ ವರೆಗೆ ಸಂಸ್ಥೆ ಮಾಸಾಶನ ನೀಡುತ್ತಿದೆ ಎಂದರು.
ಕೂಡ್ಲಿಗಿ ತಾಲೂಕಿನಲ್ಲಿ 24 ಜನರಿಗೆ ಮಾಸಾಶನ ನೀಡಲಾಗುತ್ತಿದೆ. ವಾತ್ಸಲ್ಯ ಯೋಜನೆಯಡಿ ತಾಲೂಕಿನಲ್ಲಿ ಈಗಾಗಲೇ ಎರಡು ಕುಟುಂಬಗಳಿಗೆ 1 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸವಾರ್ಂಗೀಣ ಅಭಿವೃದ್ದಿಗೆ ಸ್ವಸಹಾಯ ಗುಂಪುಗಳ ಮೂಲಕ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಗ್ರಾಪಂ ಸದಸ್ಯ ಬಸಣ್ಣ ಮಾತನಾಡಿ, ಸರ್ಕಾರದ ಅನೇಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲಪುತ್ತಿಲ್ಲ. ಹೀಗಾಗಿ ವಸತಿ ರಹಿತ ಬಡ ಕುಟುಂಬಗಳು ಇವೆ. ನೈಜ ಫಲಾನುಭವಿಗಳನ್ನು ಗುರುತಿಸಿ ಧರ್ಮಸ್ಥಳ ಸಂಸ್ಥೆ ವತಿಯಿಂದ ಮನೆ ನಿರ್ಮಿಸಿ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ರೇಖಾ ನೀರಲಕೇರಿ, ತಾಯಕನಹಳ್ಳಿ ವಲಯ ಮೇಲ್ವಿಚಾರಕ ಪ್ರಕಾಶ್, ಗ್ರಾಪಂ ಸದಸ್ಯ ಪೂಜಾರಿ ಪಾಲಣ್ಣ, ಮುಖಂಡರಾದ ಮಂಜಣ್ಣ, ಮಹಮ್ಮದ್, ಬೋರಣ್ಣ, ಸೇವಾ ಪ್ರತಿನಿಧಿ ರವಿ, ನಾಗಭೂಷಣ, ತಿಪ್ಪಣ್ಣ, ಗೋವಿಂದರಾಜು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಊರಿನ ಮುಖಂಡರು ಇತರರಿದ್ದರು.