ಸ್ತ್ರೀ ಕುಲಕ್ಕೆ ಶಿಕ್ಷಣ ನೀಡಿದ ತಾಯಿ

Kudligi Savitribai Phule birthday
ಕೂಡ್ಲಿಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಬಿಇಒ ಪದ್ಮನಾಭ ಕರಣಂ ಉದ್ಘಾಟಿಸಿದರು. ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಜಿ.ಕೊಟ್ರಗೌಡ, ಕೊಟ್ಟೂರು ತಾಲೂಕು ಅಧ್ಯಕ್ಷ ಮರುಳನ ಗೌಡ, ಉಪಾಧ್ಯಕ್ಷ ಎಚ್.ಜಿ.ಹನುಮಂತಪ್ಪ ಇತರರಿದ್ದರು.
Published on

ಕೂಡ್ಲಿಗಿ: ಹೆಣ್ಣುಮಕ್ಕಳು ಕೂಡ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ಕಷ್ಟಗಳನ್ನು ಲೆಕ್ಕಿಸದೆ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿ ತೋರಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ ಆಗಿದ್ದಾರೆ ಎಂದು ಬಿಇಒ ಪದ್ಮನಾಭ ಕರಣಂ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಮಹಿಳೆಯರು ಮತ್ತು ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದವರಿಗೆ ಶಿಕ್ಷಣ ನೀಡಿದವರಲ್ಲಿ ಮೊದಲಿಗರಾಗಿದ್ದಾರೆ ಎಂದರು.

ಮಹಿಳೆಯರಿಗೆ ಶಿಕ್ಷಣ ನೀಡಲು ಶಾಲೆಗೆ ಹೋಗುತ್ತಿದ್ದ ಸಾವಿತ್ರಿಬಾಯಿ ಫುಲೆ ಅವರಿಗೆ ಜನರು ಕಲ್ಲು, ಸೆಗಣಿ, ಕಸ, ಕೆಸರು ಎರಚಿ ಕೇಕೆ ಹಾಕಿ ನಗುತ್ತಿದ್ದರು. ಇಂತಹ ಕಷ್ಟಗಳನ್ನು ಸಹಿಸಿಕೊಂಡ ಸಾವಿತ್ರಿಬಾಯಿ ಫುಲೆ ತನ್ನ ಮೇಲೆ ಹಾಕುತ್ತಿರುವುದು ಹೂವುಗಳು ಎಂದು ಸಹಿಸಿಕೊಂಡು ಶಾಲೆಗೆ ಹೋಗುತ್ತಿದ್ದರು ಎಂದರು.

ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮಾತನಾಡಿ, ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನೆ ಮುಂತಾದ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೋಸ್ಕರ ಪ್ರಪಥಮವಾಗಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ವಿದ್ಯೆ ಕೆಲವರಿಗೆ ಸೀಮಿತವಾಗದೆ ಎಲ್ಲರಿಗೂ ಸಿಗಬೇಕು ಎಂಬ ಆಲೋಚನೆ ಮಾಡಿ ಅಕ್ಷರದೂಟ ಉಣಬಡಿಸಿ ಅಕ್ಷರದವ್ವ ಎಂದೆನಿಸಿಕೊಂಡರು ಎಂದು ಬಣ್ಣಿಸಿದರು.

ಸಾವಿತ್ರಿಬಾಯಿ ಫುಲೆ ಅವರ ಜೀವನಾದರ್ಶವನ್ನು ಪ್ರತಿಯೊಬ್ಬರೂ ಅರಿತು ಜೀವನ ಸಾಗಿಸುವ ಮೂಲಕ ಶಿಕ್ಷಣದ ಮಹತ್ವ ಸಾರಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ತಾಲೂಕಿನ 18 ಶಾಲೆಗಳ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಜಿ. ಕೊಟ್ರಗೌಡ, ಕೊಟ್ಟೂರು ತಾಲೂಕು ಅಧ್ಯಕ್ಷ ಮರುಳನಗೌಡ, ಉಪಾಧ್ಯಕ್ಷ ಎಚ್.ಜಿ.ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net