ಎಡಬಿಡದೆ ಸುರಿದ ಮಳೆಗೆ ಬೆಳೆಗಳು ಹಾಳು; ರೈತರಿಗೆ ಸಂಕಷ್ಟ ತಂದ ವರುಣ

081022 Kudligi Grounnet Loss
ಕೂಡ್ಲಿಗಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆಯಾಗುತ್ತಿದ್ದರಿಂದ ಶೇಂಗಾ ಬೆಳೆ ಮುಳುಗಿರುವುದು.
Published on

ಕೂಡ್ಲಿಗಿ: ಮುಂಗಾರು ಫಸಲು ಉತ್ತಮವಾಗಿ ಬಂದಿದ್ದು, ರೈತರ ಕೈ ಸೇರುವ ಸಮಯದಲ್ಲಿ ಅಧಿಕ ಮಳೆ ಸುರಿದು ಬೆಳೆ ನಷ್ಟ ಅನುಭವಿಸುವಂತಾಗಿದೆ.

ಮೇ ತಿಂಗಳು ತಾಲೂಕಿನಲ್ಲಿ ವಾಡಿಕೆಯ 42.ಮಿ.ಮೀ ಗಿಂತ ಅಮೂರು ಪಟ್ಟು ಹೆಚ್ಚು ಅಂದರೆ 133 ಮಿ.ಮೀ. ಮಳೆಯಾಗಿದೆ. ಈ ಸಂದರ್ಭದಲ್ಲಿ 11.40 ಹೆಕ್ಟೇರ್ ವೀಳ್ಯದೆಲೆ, 5.51 ಹೆಕ್ಟೇರ್ ಮೆಣಸಿನಕಾಯಿ, ಈರುಳ್ಳಿ, 3.40 ಹೆಕ್ಟೇರ್, 31.75 ಹೆಕ್ಟೇರ್ ಟೊಮ್ಯಾಟೊ ಬೆಳೆ ಹಾನಿಯಾಗಿದೆ. ಈಚೆಗೆ ಸುರಿದ ಮಳೆಗೆ ಈರುಳ್ಳಿ, ಟೊಮ್ಯಾಟೊ ಸೇರಿ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, ಬಾಳೆ ಬೆಳೆಗೆ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೈಬ್ರೀಡ್ ಜೋಳ ಉತ್ತಮವಾಗಿ ಬಂದಿದ್ದು, ಸೆಪ್ಟೆಂಬರ್ ಕೊನೆ ವಾರದಲ್ಲಿ ಕಟಾವು ಮಾಡಲಾಗಿದೆ. ಈ ವೇಳೆ ಬಿದ್ದ ಮಳೆಯಿಂದ ಕೆಲವೆಡೆ ಜೋಳ ಕಪ್ಪಾಗಿದೆ. ಮೆಕ್ಕೆಜೋಳದ ಕಟಾವು ಮುಂದುವರಿದ್ದು, ಒಕ್ಕಣೆ ಮಾಡಲು ರೈತರು ಪರದಾಡುವಂತಾಗಿದೆ. ಕೆಲವು ಕಡೆ ಮಳೆ ನೀರಿನಲ್ಲಿ ಮೆಕ್ಕೆಜೋಳದ ತೆನೆ ನೆನೆದು ಹಾಳಾಗಿವೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ 28 ಕೆರೆಗಳಲ್ಲಿ 6 ಕೆರೆ ಭರ್ತಿಯಾಗಿದ್ದು, ತಾಲೂಕಿನ ಅತಿ ದೊಡ್ಡ ಕೆರೆಯಾಗಿರುವ ಗಂಡಬೊಮ್ಮನಹಳ್ಳಿ ಕೆರೆ 11 ವರ್ಷದ ನಂತರ ಕೋಡಿ ಬಿದ್ದಿದ್ದು ರೈತರಲ್ಲಿ ಹರ್ಷ ಮೂಡಿಸಿದೆ.

ಇನ್ನು ಗ್ರಾಪಂ ವ್ಯಾಪ್ತಿಯ 18 ಕೆರೆಗಳಲ್ಲಿ 8 ಕೋಡಿ ಬಿದ್ದಿವೆ. ಅಂತರ್ಜಲವೂ ಹೆಚ್ಚಳವಾಗಿದೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾವನ್ನು 31,785 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಸಕಾಲದಲ್ಲಿ ಮಳೆ ಬೀಳುತ್ತಿರುವುದರಿಂದ ಬೆಳೆ ಸಮೃದ್ಧವಾಗಿದೆ. ಆದರೆ ಕೆಲ ಹೊಲಗಳಲ್ಲಿ ನೀರಿನಾಂಶ ಹೆಚ್ಚಾಗಿ ಫಸಲು ಬಿಳಚಿಕೊಂಡಿದೆ. ಈಗ ಕಾಯಿ ಕಟ್ಟಿದ್ದು, ಇನ್ನೊಂದೆರಡು ಬಾರಿ ಮಳೆಯಾಗಿ, ಎಲೆ ಚುಕ್ಕಿ ರೋಗ ಹಾಗೂ ಬೂದಿ ರೋಗ ಬೀಳದೆ ಇದ್ದರೆ ಉತ್ತಮ ಇಳುವರಿ ಪಡೆಯುವ ಭರವಸೆಯಲ್ಲಿ ರೈತರಿದ್ದಾರೆ.

ತಾಲೂಕಿನಲ್ಲಿ ಈವರೆಗೆ 115ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಆದರೆ, ಪರಿಹಾರ ಸಿಕ್ಕಿರುವುದು 10 ಮನೆಗಳಿಗೆ ಮಾತ್ರ. ಮಳೆಯಿಂದ ಮೃತಪಟ್ಟಿದ್ದ ನಾಲ್ಕು ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net