

ಕೂಡ್ಲಿಗಿ: ದೈನಂದಿನ ಕಾರ್ಯನಿರತ ಜೀವನವು ಎಷ್ಟೇ ಅನಿವಾರ್ಯವಾಗಿದ್ದರೂ ನಮ್ಮ ದೇಹ-ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ತಹಸೀಲ್ದಾರ್ ವಿ. ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೀವನ್ ಸಂಗೀತ್ ಸಂಸ್ಥೆಯಿಂದ ಕಂದಾಯ ಅಧಿಕಾರಿಗಳಿಗೆ ಭಾನುವಾರ ಏರ್ಪಡಿಸಿದ್ದ ಒತ್ತಡ ನಿರ್ವಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜೀವನ ನಿರಂತರವಾಗಿ ವೇಗದಿಂದ ಸಾಗುವಂತೆ ಭಾಸವಾಗುತ್ತದೆ. ಎಲ್ಲರೂ ಒಂದಲ್ಲ ಒಂದು ಕಾರ್ಯಗಳಲ್ಲಿ ಬಿಡುವಿಲ್ಲದೆ ನಿರತರಾಗಿರುವುರಿಂದ ಒತ್ತಡವೂ ಸಹಜ. ಹಾಗಾಗಿ ಧ್ಯಾನ, ಯೋಗಾಭ್ಯಾಸಗಳನ್ನು ಮಾಡಬೇಕು ಎಂದರು.
ನಿತ್ಯ ಕೆಲವು ನಿಮಿಷ ಮಾಡುವ ಧ್ಯಾನವು ಶಾಂತಿ ಮತ್ತು ಏಕಾಗ್ರತೆ ನೀಡುತ್ತದೆ. ಮನಸ್ಸು ಮತ್ತು ದೇಹಕ್ಕೆ ಆಳವಾದ ಪ್ರಯೋಜನಗಳನ್ನು ನೀಡುತ್ತದೆ.
ಹಾಗೆಯೇ ಸಂಗೀತ, ಉತ್ತಮ ಪುಸ್ತಕಗಳನ್ನು ಓದುವುದರಿಂದ ಕಚೇರಿಯಲ್ಲಿನ ಒತ್ತಡದಿಂದ ನಾವು ಮುಕ್ತರಾಗಿ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಎಚ್.ಎಂ.ನಾಗರಾಜ ಕಲ್ಕಟ್ಟೆ ಮಾತನಾಡಿ, ನೌಕರರಿಗೆ ಒತ್ತಡದಿಂದ ಮುಕ್ತಿ ಪಡೆಯುವುದು ಹೇಗೆ ?, ಒತ್ತಡದಲ್ಲೂ ಹರ್ಷದಿಂದ ಹೇಗೆ ಇರಬಹುದು ಎಂಬುದನ್ನು ತಿಳಿಸಿದರು.
ಜೀವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷೆ ಗೀತಾ ವೀರೇಶ್, ಕಾರ್ಯದರ್ಶಿ ಸತೀಶ್ ಸೇಠ್, ರಾಘವೇಂದ್ರ, ಸಿದ್ದಿವಿನಾಯಕ, ವೈಷ್ಣವಿ, ಗ್ರಾಮಾಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಮರುಳಸಿದ್ದಪ್ಪ, ಕಂದಾಯ ನಿರೀಕ್ಷಕ ಪ್ರಭುಕುಮಾರ್, ಇಲಾಖೆಯ ಕುಮಾರಸ್ವಾಮಿ, ಮುರುಳಿ ಕೃಷ್ಣ, ಕುಮಾರ ಸ್ವಾಮಿ, ಸವಿತಾ, ಸುನೀತಾ, ನಾಗರತ್ನ, ವಿದ್ಯಾ ಚೌಹಾಣ್ ಇತರರಿದ್ದರು.