ಜನರಿಗೆ ಸಕಾಲಕ್ಕೆ ಸರ್ಕಾರಿ ಸೇವೆ ತಲುಪಿಸಲು ಅಧಿಕಾರಿಗಳಿಗೆ ತಹಸೀಲ್ದಾರ್ ಟಿ. ಜಗದೀಶ್ ಸೂಚನೆ

200422 Kudligi SakalaDecade Jatha
ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ ಹಾಗೂ ಪಪಂ ವತಿಯಿಂದ ಸಕಾಲ ದಶಮಾನೋತ್ಸವ ಜಾಗೃತಿ ಜಾಥಾ ನಡೆಯಿತು.
Published on

ಕೂಡ್ಲಿಗಿ: ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಬ ಮಾಡದೆ ಸಮರ್ಪಕವಾಗಿ ಸಾರ್ವಜನಿಕರಿಗೆ ಮುಟ್ಟಿಸಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.

ಪಟ್ಟಣದ ಮದಕರಿ ವೃತ್ತದಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ ಹಾಗೂ ಪಪಂ ವತಿಯಿಂದ ಹಮ್ಮಿಕೊಂಡಿದ್ದ ಸಕಾಲ ಸೇವೆಯ ದಶಮಾನೋತ್ಸವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರ ಯಾವುದೇ ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ನಿಗದಿತ ಅವಧಿಯೊಳಗೆ ಮಾಡಿಕೊಡಬೇಕು. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಾಗರಿಕರು ತಮ್ಮ ಸೇವೆ ಹಾಗೂ ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ಪಡೆಯಲು ಹಿಂಜರಿಕೆ ಪಡಬಾರದು. ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಯೋಜನೆಗಳ ಲಾಭ ಪಡೆಯಬೇಕು. ಅಧಿಕಾರಿಗಳು ಸಹ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಿ ನಿಗದಿತ ಅವದಿಯೊಳಗೆ ಕೆಲಸಗಳನ್ನು ಪೂರೈಸಿಕೊಡಬೇಕು ಎಂದರು.

ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಸಿಡಿಪಿಒ ನಾಗನಗೌಡ, ಶಿಕ್ಷಣ ಸಮನ್ವಯಾಧಿಕಾರಿ ಜಮೀಲ್ ಅಹಮದ್, ತಾಪಂ ಅಧಿಕಾರಿ ಜಿ.ಪ್ರಕಾಶ್ ಹಾಗೂ ಕಂದಾಯ ಅಧಿಕಾರಿಗಳು ಜಾಥಾದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net