ಖರೀದಿಸುವವರಿಲ್ಲ ಬೀಸುವ-ಒಳಕಲ್ಲು - ತಯಾರಕರ ಬದುಕು ಅತಂತ್ರ

kdl-`1
ಕೂಡ್ಲಿಗಿ ತಾಲೂಕು ಕಚೇರಿ ಬಳಿ ಬೀಸುವಕಲ್ಲು ಹಾಗೂ ಒಳಕಲ್ಲು ತಯಾರಿಸುತ್ತಿರುವುದು. ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಬೀಸುವ ಹಾಗೂ ಒಳಕಲ್ಲುಗಳು.
Published on

ಕೂಡ್ಲಿಗಿ; ಯಂತ್ರೋಪಕರಣಗಳ ಬಳಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೀಸುವ ಮತ್ತು ಒಳಕಲ್ಲ್ಲುಗಳನ್ನು ಕೊಳ್ಳುವವರಿಲ್ಲದೆ, ಅವುಗಳನ್ನು ಮಾರಾಟ ಮಡುವವರ ಬದುಕು ಅತಂತ್ರವಾಗಿದೆ.

ಒಳಕಲ್ಲು ತಯಾರಿಸುವ ಕಲ್ಲುಗಳನ್ನು ಸಂಡೂರು ತಾಲೂಕಿನ ಬಂಡ್ರಿ, ಮೊಳಕಾಲ್ಮೂರು ತಾಲೂಕಿನ ಹಾನಗಲ್, ಗುಡೆಕೋಟೆ ಸೇರಿದಂತೆ ವಿವಿಧ ಕಡೆಯಿಂದ ಸಾವಿರಾರು ರೂ. ವ್ಯಯಿಸಿ ತರಬೇಕಿದೆ.

ತಂದ ಕಲ್ಲುಗಳನ್ನು ಕೆತ್ತನೆ ಮಾಡಿ, ಮಾರಾಟ ಮಾಡಲು ತಿಂಗಳುಗಳೆ ಉರುಳುತ್ತವೆ. ಗಾತ್ರಕ್ಕೆ ತಕ್ಕಂತೆ 500 ರಿಂದ 800 ರೂ.ವರೆಗೂ ಮಾರಾಟವಾಗುತ್ತವೆ.

100ರಿಂದ 150 ರೂ. ಲಾಭ ಸಿಗುವುದು ವಿರಳ ಎನ್ನುವುದು ಪಟ್ಟಣದ ಗುಡೆಕೋಟೆ ರಸ್ತೆಯ ತಾಲೂಕು ಕಚೇರಿ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕೆತ್ತನೆ ಕಾರ್ಯದಲ್ಲಿ ತೊಡಗಿರುವ ಚೌಡಪ್ಪ ಹಾಗೂ ಸಾರವ್ವ ದಂಪತಿಯ ಮಾತು.

ಹಿಂದಿನ ಕಾಲದಲ್ಲಿ ಒಳಕಲ್ಲು, ಬೀಸುವ ಕಲ್ಲುಗಳ ಬಳಕೆ ಹೆಚ್ಚಿತ್ತು. ಆದರೆ, ಇಂದು ಸಂಪ್ರದಾಯಕ್ಕೆಂಬಂತೆ ಹೊಸ ಮನೆ ನಿರ್ಮಿಸಿದವರು ಮಾತ್ರ ಖರೀದಿಸುತ್ತಿದ್ದಾರೆ. ಹೀಗಾಗಿ ಈ ಕಸುಬುದಾರರು ಅಕ್ಷರಶಃ ಬೀದಿಗೆ ಬರುವಂತಾಗಿದೆ.

ಇವರ ಉಪ ಜೀವನದ ಕಲೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಸಹಾಯ, ಸಹಕಾರ ನೀಡಬೇಕೆನ್ನುವುದು ಇವರ ಕೋರಿಕೆಯಾಗಿದೆ.

‘ನಮಗೆ ವಾಸ ಮಾಡಲು ಮನೆಯೇ ಇಲ್ಲ. ಹಸಿವು ನೀಗಿಸಿಕೊಳ್ಳುವುದೇ ಸವಾಲಾಗಿದೆ. ಕಲ್ಲು ಕೆತ್ತನೆಯಿಂದ ಅನಾರೋಗ್ಯಕ್ಕೂ ತುತ್ತಾಗುತ್ತೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು, ಮತ್ತೆ ಇದೇ ಕೆಲಸ ಮುಂದುವರಿಸುವುದಾಗಿದೆ. ದಿನವೆಲ್ಲ ಕಷ್ಟಪಟ್ಟರೂ ವ್ಯಾಪಾರವೇ ಇರುವುದಿಲ್ಲ’ ಎನ್ನುವುದು ಇವರ ಅಳಲು.

====

ಪೂರ್ವಜರಿಂದ ಬಂದ ಕಸುಬನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ಯಂತ್ರಗಳ ಹೆಚ್ಚು ಬಳಕೆಯಿಂದ ನಮ್ಮ ಕಸುಬು ಅವಸಾನದ ಅಂಚಿಗೆ ತಲುಪಿದೆ. ಇಂಥ ಕಸುಬುಗಳನ್ನು ಉತ್ತೇಜಿಸುವ ಸರ್ಕಾರದ ಯೋಜನೆ ನಮಗೆ ಗೊತ್ತಿಲ್ಲ. ಹೇಗೋ ಕಷ್ಟಪಟ್ಟು ಕುಟುಂಬದವರ ಜತೆ ಇಲ್ಲಿವರೆಗೆ ಜೀವನ ತಳ್ಳಿಕೊಂಡು ಬಂದಿದ್ದೇವೆ.

> ಸಾರವ್ವ, ಒಳಕಲ್ಲು ತಯಾರಕಿ, ಕೂಡ್ಲಿಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net