

ಕೂಡ್ಲಿಗಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಪಂಚಮಿ ಪ್ರಯುಕ್ತ ಮಹಿಳೆಯರು ಮನೆಯ ಅಂಗಳದಲ್ಲಿ ನಾಗರ ಹಾವಿನ ಬಗೆ ಬಗೆಯ ರಂಗೋಲಿ ಹಾಕಿದ್ದರು. ಹೊಸಬಟ್ಟೆ ಧರಿಸಿದ್ದ ಮಹಿಳೆಯರು, ಮಕ್ಕಳು ಹತ್ತಿರದ ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ತೆರಳಿ ನಾಗಮೂರ್ತಿ ಹಾಗೂ ಹುತ್ತಗಳಿಗೆ ಶ್ರದ್ಧೆ-ಭಕ್ತಿಯಿಂದ ಪೂಜೆ ಮಾಡಿ ಹಾಲೆರೆದರು. ನಂತರ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದರು.
ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹುತ್ತ, ನಾಗಮೂರ್ತಿಗಳಿಗೆ ಹಾಲೆರೆದು ಸಂಭ್ರಮಿಸಿದರು. ನಂತರ ಹಬ್ಬಕ್ಕೆಂದು ಮಾಡಿದ್ದ ಶೇಂಗಾ ಉಂಡೆ, ಎಳ್ಳುಂಡೆ, ರವೆ ಉಂಡೆ, ಬೇಸನ್ ಲಾಡು ಹಾಗೂ ಗಾರಿಗೆ(ಕಜ್ಜಾಯ)ಯನ್ನು ಮನೆ ಮಂದಿ ಒಟ್ಟಿಗೆ ಕುಳಿತು ಭೋಜನ ಸವಿದರು.
ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರೆ, ಯುವತಿಯರು, ಮಕ್ಕಳು ಜೋಕಾಲಿ ಆಡಿ ಖುಷಿಪಟ್ಟರು. ಗುರುವಾರ ರೊಟ್ಟಿ ಹಬ್ಬದ ಅಂಗವಾಗಿ ಮಹಿಳೆಯರು ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಪುಂಡಿ ಸೊಪ್ಪು, ಕಾಳು ಪಲ್ಯ, ಶೇಂಗಾ ಪುಡಿ, ಗುರೆಳ್ಳು ಪುಡಿ, ಮೊಸರು ಬುತ್ತಿ (ಅನ್ನ) ತಯಾರಿಸಿ ಹಬ್ಬಕ್ಕೆ ಆಗಮಿಸಿದ ಸಂಬಂಧಿಕರೊಂದಿಗೆ ಸಾಮೂಹಿಕ ಭೋಜನ ಮಾಡಿ ಮೆರುಗು ತಂದರು.