ಸುಂದರ-ಸ್ವಚ್ಛ ಪಟ್ಟಣಕ್ಕೆ ಕ್ರಮ

0000
Published on

ಕೂಡ್ಲಿಗಿ: ಸುಂದರ ಹಾಗೂ ಸ್ವಚ್ಛ ಪಟ್ಟಣವನ್ನಾಗಿಸಲು ಅವಶ್ಯ ಅನುದಾನ ನೀಡಿದ್ದೇನೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಹೊಸಪೇಟೆ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನ ಬಳಿ ಪಪಂ ವತಿಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಅನುದಾನದಡಿ ಹಂತ 4ರ ರಸ್ತೆ ಮತ್ತು ಚರಂಡಿ ಕಾಮಾಗಾರಿಗೆ ಭೂಮಿಪೂಜೆ ನೆರವೇರಿಸಿ ಶುಕ್ರವಾರ ಮಾತಾನಾಡಿದರು.

ಈಗಾಗಲೇ ಕುಡಿವ ನೀರು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸ್ಥಳೀಯ ಅನುದಾನದ ಜತೆ ಶಾಸಕರ ಅನುದಾನ ನೀಡಿ ಹಲವು ಸೌಕರ್ಯಗಳನ್ನು ಜನರಿಗೆ ಕಲ್ಪಿಸಿರುವೆ. ಪಪಂ ಕಚೇರಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ಈಗಾಗಲೇ ಲೋಕಾರ್ಪಣೆ ಮಾಡಿ ಸಿಬ್ಬಂದಿಗೆ ಅನುಕೂಲ ಕಲ್ಪಿಸಿದ್ದೇನೆ. ಅದರಂತೆ ಇಂದು ವಾರ್ಡುಗಳಿಗೂ ರಸ್ತೆ, ಕುಡಿವ ನೀರು, ಚರಂಡಿ ಹಾಗೂ ಬೀದಿ ದೀಪ ಅಳವಡಿಕೆ ಮುಂದಾಗಿದ್ದೇವೆ. ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಈಗಾಗಲೇ ಡಿಪ್ಲೊಮಾ ಕಾಲೇಜು, ಮಹಾದೇವ ಮೈಲಾರ ಕ್ರೀಡಾಂಗಣ ನಿರ್ಮಾಣ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಕಟ್ಟವನ್ನು ಎಂಟು ಎಕರೆ ಜಮೀನಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಶೀಘ್ರವೇ ಲೋಕಾರ್ಪಣೆ ಗೊಳ್ಳಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ವಿಜ್ಞಾನ ವಿಭಾಗ ಕೂಡ ಕಾರ್ಯರಂಭ ಮಾಡಲಿದೆ. ತಾಲೂಕಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಂಬೇಡ್ಕರ್ ಹಾಗೂ ಏಕಲವ್ಯ ವಸತಿ ಶಾಲೆಗಳಿಗೆ ಜಮೀನು ಮಂಜೂರು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿರುವೆ ಎಂದು ತಿಳಿಸಿದರು.

ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನ ಗೌಡ ಪಾಟೀಲ್, ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪೂರ್ಯನಾಯ್ಕ, ಸದಸ್ಯರಾದ ಸಿರಬಿ ಮಂಜುನಾಥ, ಕಾವಲಿ ಶಿವಪ್ಪನಾಯಕ, ಪಿ.ಚಂದ್ರು, ಕಾಲ್ಚಟ್ಟಿ ಈಶಪ್ಪ, ಢಾಣಿ ಚೌಡಮ್ಮ, ಮುಖಂಡರಾದ ಕೆ.ಎಂ. ತಿಪ್ಪೇಸ್ವಾಮಿ, ಬಿ.ಭೀಮೇಶ್, ಎಸ್.ಪಿ.ಪ್ರಕಾಶ್, ಎಸ್.ದುರುಗೇಶ್, ಪಾಪನಾಯಕ, ಎಸ್. ಸುರೇಶ್, ಪವಿತ್ರಾ, ಶೋಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net