

ಕೂಡ್ಲಿಗಿ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬ ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಲು ಕಾರಣವೇನು ಎಂದು ತಹಸೀಲ್ದಾರ್ ಎಂ.ರೇಣುಕಾಗೆ ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ಪ್ರಶ್ನಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳು ಸಕಾಲದಲ್ಲಿ ಮಾಡಿಕೊಡುತ್ತಿಲ್ಲವೆಂದು ಜನರು ದೂರುತ್ತಿದ್ದು, ತಹಸೀಲ್ದಾರ್ ಅವರು ಉತ್ತರ ನೀಡಬೇಕು ಎಂದರು. ಇದಕ್ಕೆ ತಹಸೀಲ್ದಾರ್ ರೇಣುಕಾ ಪ್ರತಿಕ್ರಿಯಿಸಿ, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಹಂತ ಹಂತವಾಗಿ ವಿಲೇವಾರಿ ಮಾಡಿರುವುದಾಗಿ ತಿಳಿಸಿದರು. ಇದಕ್ಕೆ ಅಸಮಾಧಾನಗೊಂಡ ಶಾಸಕ ಶ್ರೀನಿವಾಸ್, ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಮಾಡಿದ್ದರೆ ನನಗ್ಯಾಕೆ ದೂರುಗಳು ಬರುತ್ತಿದ್ದವು ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಎಸಿ ವಿವೇಕಾನಂದ ಮಾತನಾಡಿ, ನೀವು (ತಹಸೀಲ್ದಾರ್) ಕೆಳ ಹಂತದ ಅಧಿಕಾರಿಗಳ ಲಾಗಿನ್‌ನಲ್ಲಿ ಪ್ರತಿದಿನ ಅರ್ಜಿ ವಿಲೇವಾರಿ ಬಗ್ಗೆ ಪರಿಶೀಲಿಸುವುದಿಲ್ಲವೇ ಎಂದರು.
ಶಾಸಕ ಡಾ.ಶ್ರೀನಿವಾಸ್ ಮಾತನಾಡಿ, ಇಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಸಾರ್ವಜನಿಕರ ಯಾವುದೇ ಕೆಲಸ ಇದ್ದರೂ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳಿಗೆ ತಲುಪುತ್ತವೆ. ಈ ಬಗ್ಗೆ ಅನೇಕ ಬಾರಿ
ಎಚ್ಚರಿಕೆ ನೀಡಿದರೂ ನಿರ್ಲಕ್ಷೃ ತೋರುತ್ತಿದ್ದಾರೆ. ಇದು ಮುಂದುವರಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ. ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ, ಇಲ್ಲವೇ ಬೇರೆಡೆ ಹೋಗಿ ಎಂದು ಖಡಕ್ ಸೂಚನೆ ನೀಡಿದರು.
ಉಪ ನೋಂದಣಿ ಇಲಾಖೆಯಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ನೋಂದಣಿ ಮಾಡಲಾಗುತ್ತಿದೆ ಎನ್ನುವ ದೂರುಗಳಿವೆ ಇದೆ ಎಂದು ಉಪ ನೋಂದಣಿ ಅಧಿಕಾರಿ ವೈಶಾಲಿ ಅವರನ್ನು ಶಾಸಕ ಪ್ರಶ್ನಿಸಿದರು. ಇದಕ್ಕೆ ವೈಶಾಲಿ ಮಾತನಾಡಿ, ನೋಂದಣಿ ಮಾಡಲು ಸರ್ಕಾರ ಸೂಚಿಸಿದ ದಾಖಲೆಗಳನ್ನು ನೋಡಿಯೇ ನೋಂದಣಿ ಮಾಡಲಾಗುತ್ತದೆ ಎಂದರು. ಸರ್ವೇ ಇಲಾಖೆಯಲ್ಲಿ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಅದರಂತೆ ಮೂರು ಹೋಬಳಿಗಳ ಕಂದಾಯ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಡಾ.ಶ್ರೀನಿವಾಸ್ ನಿರ್ದೇಶಿಸಿದರು. ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಉಪ ತಹಸೀಲ್ದಾರ್ ಚಂದ್ರಶೇಖರ, ಶಿರಸ್ತೇದಾರ್ ಕೊಟ್ರಮ್ಮ ಇತರರಿದ್ದರು.