ಹಳೇ ಆಸ್ಪತ್ರೆ ಜಾಗದಲ್ಲಿ ಮಕ್ಕಳ ಹಾಸ್ಪಿಟಲ್ ನಿರ್ಮಾಣ

KUDGLIGI MLA
Published on

ಕೂಡ್ಲಿಗಿ: ಮಕ್ಕಳ ಆಸ್ಪತ್ರೆ ನಿರ್ಮಾಣ ಹಿನ್ನೆಲೆಯಲ್ಲಿ ಪಟ್ಟಣದ ಹೃದಯಭಾಗದಲ್ಲಿನ ಹಳೇ ಆಸ್ಪತ್ರೆಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ವಿಜಯನಗರ ಸಿಇಒ ಸದಾಶಿವ ಪ್ರಭು ಅವರೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಜನತೆಗೆ ಉತ್ತಮ ಸೇವೆ ಒದಗಿಸಿದ್ದ ಹಳೇಯ ಆಸ್ಪತ್ರೆ ಈಗ ನೂರು ಹಾಸಿಗೆಯಾಗಿ ಮೇಲ್ದರ್ಜೆಗೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇದರಿಂದ ನಿರುಪಯುಕ್ತವಾದ ಹಳೇ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಜನಸಂಖ್ಯೆ ಹೆಚ್ಚಾದಂತೆ ಆರೋಗ್ಯ ಸೇವೆಗೂ ಮಹತ್ವ ಹೆಚ್ಚಿದೆ.

ಹೀಗಾಗಿ ಹಳೇ ಕಟ್ಟಡ ಜಾಗದಲ್ಲಿ ಮಕ್ಕಳ ಆಸ್ಪತ್ರೆ ಮಾಡುವ ಜತೆಗೆ ಅಣತಿ ದೂರದಲ್ಲಿರುವ ಸಿಬ್ಬಂದಿಗಳ ವಸತಿ ಗೃಹಗಳನ್ನು ಮರು ನಿರ್ಮಿಣ ಮಾಡುವುವ ಬಗ್ಗೆ ಜಿಪಂ ಸಿಇಒ ಜತೆ ಚರ್ಚಿಸಿದ ಶಾಸಕರು, ಈಗಾಗಲೇ ಮಕ್ಕಳ ಆಸ್ಪತ್ರೆಗೆ 3 ಕೋಟಿ ರೂ. ಮಂಜೂರಾಗಿದ್ದು, ಜಾಗ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಾಗದ ಪತ್ರಗಳನ್ನು ಜಿಪಂ ಎಇಇ ಮಲ್ಲಿಕಾರ್ಜುನ ಹಾಗೂ ಟಿಎಚ್‌ಒ ಪ್ರದೀಪ್ ಕುಮಾರ್‌ಗೆ ನೀಡಲು ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್‌ಗೆ ಆದೇಶಿಸಿದ ಶಾಸಕರು, ಶೀಘ್ರವೇ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದರು.

ಇದಕ್ಕೂ ಮೊದಲು ನೂರು ಹಾಸಿಗೆ ಆಸ್ಪತ್ರೆಗೆ ಧೀಡಿರ್ ಭೇಟಿ ನೀಡಿ ಅಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಕಟ್ಟಡಗಳ ಮಾಹಿತಿ ಪಡೆದ ಶಾಸಕರು, ಅವುಗಳ ಬಳಕೆಗೆ ಯೋಜನೆ ರೂಪಿಸಲು ಜಿಪಂ ಎಇಇಗೆ ಸೂಚಿಸಿದರು. ಆಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಬಗ್ಗೆ ಜಿಪಂ ಸಿಇಒಗೆ ಮಾಹಿತಿ ನೀಡಿ ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು. ಅದರಂತೆ ತಾಲೂಕಿನ ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸುವ ಕುರಿತು ಚರ್ಚೆ ನಡೆಸಿದರು.

ಮಾಜಿ ಜಿಪಂ ಸದಸ್ಯ ದೊಡ್ಡ ರಾಮಣ್ಣ. ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಜಿ.ಬಸವರಾಜ, ಢಾಣಿ ರಾಘವೇಂದ್ರ, ಗ್ಯಾಸ್ ವೆಂಕಟೇಶ್, ಹುಲಿಕುಂಟೆಪ್ಪ, ತಳವಾರ ಶರಣಪ್ಪ, ಬಾಲಾಜಿ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net