ಜನರ ನಿರೀಕ್ಷೆ ಹುಸಿಯಾಗದಂತೆ ಕಾರ್ಯನಿರ್ವಹಿಸಿ

Untitled design(20)
Published on

ಕೂಡ್ಲಿಗಿ: ಜನರ ನಿರೀಕ್ಷೆಗೆ ತಕ್ಕಂತೆ ಪಪಂ ಸದಸ್ಯರು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಪಪಂ ಕಚೇರಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಪಂ ಅನುದಾನವನ್ನು 20 ವಾರ್ಡ್‌ಗಳಿಗೆ ಸಮರ್ಪಕವಾಗಿ ಬಳಕೆ ಮಾಡಿ. ಅವಶ್ಯ ಬಿದ್ದರೆ ಶಾಸಕರ ಅನುದಾನವನ್ನು ನೀಡಿ ಕಾಮಗಾರಿ ಪೂರ್ಣಗೊಳಿಸುವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಜನರ ನಿರೀಕ್ಷೆ ಸುಳ್ಳಾಗದಂತೆ ಪಟ್ಟಣವನ್ನು ಅತ್ಯಂತ ಸುಂದರ, ಸ್ವಚ್ಛವಾಗಿಡಬೇಕು. ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಜನರ ಮನಸ್ಸು ಗೆಲುವು ಕಾರ್ಯ ಮಾಡೋಣ ಎಂದು ತಿಳಿಸಿದರು.

ಪಪಂ ಅನುದಾನದ ಬಹುತೇಕ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಸಂಬಂಧಿಸಿದ ಇಂಜಿನಿಯರ್ ಹಾಗೂ ಅಧಿಕಾರಿಗಳು ಏನು ಸಮಸ್ಯೆ ಇದೆ ಅದನ್ನು ತಿಳಿಸಬೇಕು. ಪರಿಸ್ಥಿತಿ ಹೀಗೆಯೇ ಇದ್ದರೆ ಜನರಿಗೆ ಯಾವ ಸಂದೇಶ ಹೋಗುತ್ತದೆ ಯೋಚಿಸಿ. ಮೊದಲು ಕಾಮಗಾರಿ ಆರಂಭಿಸಬೇಕು. ಹೆಚ್ಚಿನ ಅನುದಾನ ಬೇಕಾದಲ್ಲಿ ಒದಗಿಸಲಾಗುವುದು. ಜಿಲ್ಲಾ ಖನಿಜ ನಿಧಿಯಿಂದ ಸುಮಾರು 20 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಕಾಮಗಾರಿ ಎಲ್ಲಿ ಆಗಬೇಕೆಂದು ತಿಳಿಸಿದರೆ ಪಟ್ಟಿಯಲ್ಲಿ ಸೇರಿಸಿ ಅನುದಾನ ಒದಗಿಸಲಾಗುತ್ತದೆ ಎಂದು ಶಾಸಕ ಡಾ.ಎನ್.ಶ್ರೀನಿವಾಸ್ ಭರವಸೆ ನೀಡಿದರು.

ಗುಳೆ ಲಕ್ಕಮ್ಮ ಜಾತ್ರೆಯ ಯಶಸ್ವಿಗೆ ಶ್ರಮಿಸಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಪ್ರಹ್ಲಾದ ಚನ್ನಗಿರಿ ಹಾಗೂ ಪಿಎಸ್‌ಐ ಸಿ. ಪ್ರಕಾಶ್ ಅವರಿಗೆ ಸನ್ಮಾನ ಮಾಡಲಾಯಿತು.

ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಮುಖ್ಯಾಧಿಕಾರಿ ಎ.ನಸ್ರುಲ್ಲ, ಸದಸ್ಯರಾದ ತಳಾಸ್ ವೆಂಕಟೇಶ, ಕೆ.ಈಶಪ್ಪ, ಪಿ.ಚಂದ್ರು, ಸಚಿನ್ ಕುಮಾರ್, ಸಿರಬಿ ಮಂಜುನಾಥ, ಬಾಸೂ ನಾಯ್ಕ, ರೇಣುಕಾ ದುರುಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net