

ಕೂಡ್ಲಿಗಿ: ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ತರುವ ಯೋಜನೆಯನ್ನು ಸರ್ಕಾರ ನೀಡುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ವಿಜಯನಗರ ಜಿಪಂ ಸಿಇಒ ಹರ್ಷಲ್ ಬೋಯೋರ್ ನಾರಾಯಣರಾವ್ ಹೇಳಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ಕೋಳಿ ಸಾಕಣೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರತೆ ನೀಡುವ ದೃಷ್ಟಿಯಿಂದ ಸರ್ಕಾರ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಡಿ ಕೆರೆ ಹೂಳು ತೆಗೆಯುವುದು, ಕೊಟ್ಟಿಗೆಗಳ ನಿರ್ಮಾಣ, ರೇಷ್ಮೆ ಸೇರಿದಂತೆ ನಾನಾ ಯೋಜನೆಗಳ ಮೂಲಕ ಗ್ರಾಮೀಣರ ಬದುಕನ್ನು ಹಸನು ಮಾಡುವ ಉದ್ದೇಶ ಸರ್ಕಾರಕ್ಕೆ ಇದೆ. ಇದರ ಸದುಪಯೋಗವನ್ನು ಜನರು ಪಡೆಯಬೇಕು. ಈ ನಿಟ್ಟಿನಲ್ಲಿ ವೈಯಕ್ತಿಕ ಕೋಳಿ ಸಾಕಣೆ ಕೇಂದ್ರಗಳನ್ನು ನರೇಗಾದಲ್ಲಿ ಮಾಡಬಹುದಾಗಿದ್ದು, ಒಂದು ಘಟಕ ನಿರ್ಮಾಣಕ್ಕೆ 35ಸಾವಿರ ರೂ. ಅನುದಾನ ನೀಡುತ್ತಿದ್ದು, ಇದರಿಂದ ಫಲಾನುಭವಿಗಳು 60 ಕೋಳಿಗಳನ್ನು ಸುಲಭವಾಗಿ ಸಾಕಣೆ ಮಾಡಬಹುದಾಗಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಯೋಜನಾ ನಿರ್ದೇಶಕ ಅಶೋಕ ತೋಟದ್, ತಾಪಂ ಇಒ ವೈ.ರವಿ ಕುಮಾರ್, ಗ್ರಾಪಂ ಅಧ್ಯಕ್ಷೆ ವೀರಮ್ಮ, ಉಪಾಧ್ಯಕ್ಷ ಟಿ.ಮೈಲಪ್ಪ, ಪಿಡಿಒ ಪ್ರಕಾಶ, ಜಿಲ್ಲೆಯ ಎಲ್ಲ ತಾಪಂಗಳ ಇಒ ಹಾಗೂ ಯೋಜನಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.