

ಕೂಡ್ಲಿಗಿ: ತಾಲೂಕಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿವುದರಿಂದ ರಾಮದುರ್ಗ ಮತ್ತು ಗುಡೇಕೋಟೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿವೆ.
ಪಟ್ಟಣದ ದೊಡ್ಡ ಕೆರೆ ಈಗಾಗಲೇ ಕೋಡಿ ಬೀಳಲು ಎರಡು ಅಡಿ ಬಾಕಿ ಇದೆ. ಪಾಳೇಗಾರರು ಕಟ್ಟಿಸಿದ ಗುಡೇಕೋಟೆ ಕೆರೆ ಬುಧವಾರ ರಾತ್ರಿ ಕೋಡಿ ಬಿದ್ದಿದೆ. ಬೇಸಿಗೆಯಲ್ಲಿ ಭಾಗಶಃ ಬತ್ತಿಹೋಗಿದ್ದ ಗುಡೇಕೋಟೆ ಕೆರೆಗೆ ಮತ್ತೆ ಜೀವಕಳೆ ಬಂದಿದ್ದರಿಂದ ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ತುಂಬಿ ತುಳುಕುತ್ತಿರುವ ಹಾಗೂ ನದಿಯಂತೆ ಭಾಸವಾಗುವ ಗುಡೇಕೋಟೆ ಮತ್ತು ರಾಮದುರ್ಗ ಕೆರೆ ನೋಡಲು ನೂರಾರು ಜನ ದೌಡಾಯಿಸುತ್ತಿದ್ದಾರೆ.
ಕೆರೆ ಭರ್ತಿಯಿಂದ ಸುತ್ತಲಿನ ಕೊಳವೆಬಾವಿಗಳಿಗೆ ಜೀವ ಕಳೆ ಬಂದಿದ್ದು, ಕೋಡಿ ಬಿದ್ದು ನಂತರ ತಾಲೂಕಿನ ಅತಿ ದೊಡ್ಡ ಗಂಡಬೊಮ್ಮನಹಳ್ಳಿ ಕೆರೆ ಸೇರಲಿದೆ. ಸುತ್ತಲಿನ ಹಳ್ಳಿ ಜನ ಜಾನುವಾರುಗಳಿಗೆ ಈ ನೀರೇ ಮೂಲವಾಗಿದೆ.