

ಕೂಡ್ಲಿಗಿ: ಬದುಕಿರುವವರೆಗೂ ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದವರು ಕೆ.ಎಂ.ತಿಪ್ಪೇಸ್ವಾಮಿ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಜ್ಞಾನಭಾರತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶನಿವಾರ ಸಾನ್ನಿಧ್ಯವಹಿಸಿ ಮಾತನಾಡಿದರು. ಹಿಂದುಳಿದ ತಾಲೂಕಿನ ಬಡ ನಿರ್ಗತಿಕ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎನ್ನುವ ಆಶಯದೊಂದಿಗೆ 40 ವರ್ಷಗಳ ಹಿಂದೆಯೇ ಕಾನಮಡುಗು ಹಾಗೂ ಕೂಡ್ಲಿಗಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಪೂರ್ವ ಪ್ರಾಥಮಿಕ ಶಾಲೆಯಿಂದ ಬಿ.ಇಡಿವರೆಗೂ ಶಿಕ್ಷಣ ದೊರೆಯುವಂತೆ ಮಾಡಿದರು. ವೃದ್ಧರಿಗೆ ಪುನಶ್ಚೇತನ ಎಂಬ ವೃದ್ಧಾಶ್ರಮ ತೆರೆದು ಅವರ ಪಾಲಿನ ದೇವರಾದರು ಎಂದರು.
ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಅತಿ ಕಡಿಮೆ ಖರ್ಚಿನಲ್ಲಿ ಈ ಭಾಗದ ಜನರಿಗೆ ಆರೋಗ್ಯ ಸೇವೆ ಕಲ್ಪಿಸಿದರು. ರಾಜಕಾರಣಿಯಾದರೂ ಯಾವುದೇ ಪದವಿಗಳನ್ನು ಅಪೇಕ್ಷಿಸದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾದರು. ಪಕ್ಕದ ಹಗರಿಬೊಮ್ಮನಹಳ್ಳಿಯಲ್ಲೂ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಯಶ ಕಂಡರು ಎಂ. ಕಳೆದ ಐದು ವರ್ಷಗಳಲ್ಲಿ ಪ್ಯಾರಾಮೆಡಿಕಲ್, ಡಿ.ಫಾರ್ಮ್, ಬಿ.ಫಾರ್ಮ್ ಹಾಗೂ ಬಿಎಸ್ಸಿ ನರ್ಸಿಂಗ್‌ನಂತಹ ವೃತ್ತಿಪರ ಕೋರ್ಸ್, ಆಯುರ್ವೇದ ಕಾಲೇಜು ಆರಂಭಿಸಿ ಈ ಭಾಗದ ಯುವಕ, ಯುವತಿಯರ ನಿರುದ್ಯೋಗದ ಬರ ನೀಗಿಸಿದರು. ಸದಾ ಕ್ರಿಯಾಶೀಲರಾಗಿದ್ದ ತಿಪ್ಪೇಸ್ವಾಮಿ ಅವರು ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರು. ಅಲ್ಲದೆ ಜಗದ್ಗುರು ರೇಣುಕಾಚಾರ್ಯರ ಪರಮ ಭಕ್ತರಾಗಿದ್ದ ಅವರು ಹಗರಿಬೊಮ್ಮನಹಳ್ಳಿಯಲ್ಲಿ ರಂಭಾಪುರಿ ರೇಣುಕಾಚಾರ್ಯರ ಮಂದಿರ ನಿರ್ಮಿಸಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದರು.
ಡೋಣುರು ಚಾನುಕೋಟಿ ಸಿದ್ಧಲಿಂಗ ಶಿವಾಚಾರ್ಯರು, ಬೆಂಗಳೂರಿನ ಬಂಡೆಮಠ ಪೀಠಾಧ್ಯಕ್ಷ ಸಚ್ಚಿದಾನಂದ ಶ್ರೀಗಳು, ಕಾನಮಡುಗು ದಾಸೋಹ ಮಠದ ಐಮುಡಿ ಶರಣಾರ್ಯರು, ಉದ್ಯಮಿ ಗುಳಿಗೆ ವೀರೇಂದ್ರ, ಚಿತ್ರದುರ್ಗದ ಬಾಪೂಜಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ವೀರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಇತರರಿದ್ದರು.