

ಕೂಡ್ಲಿಗಿ: ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುತ್ತದೆ ಎಂದು ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಲಯ ಆವರಣದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಪೀಠ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ‘ಶಿಕ್ಷಣ ಶಾಸ್ತ್ರ ವಿದ್ಯಾರ್ಥಿ ಮಾರ್ಗದರ್ಶಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ. ಟಿ.ವಿ., ಮೊಬೈಲ್‌ಗಳ ಬಳಕೆ ಹೆಚ್ಚಾಗಿದ್ದು, ದುಶ್ಚಟಗಳತ್ತ ಹೆಚ್ಚು ಆಕರ್ಷಣೆಗೊಳಗಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು ಅನೇಕ ಸಾಹಿತಿಗಳು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳು ಎದುರಾಗಬಾರದೆನ್ನುವ ದೃಷ್ಟಿಯಿಂದ ಉಪನ್ಯಾಸಕರಾದ ಡಾ.ಎಸ್.ಎಂ.ವಿಜಯಕುಮಾರ್ ಹಾಗೂ ಅಜ್ಜಯ್ಯ ಅವರು ಶಿಕ್ಷಣ ಶಾಸ್ತ್ರ ಪುಸ್ತಕ ರಚಿಸಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಪರೀಕ್ಷೆಯಲ್ಲಿ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಲೇಖಕರಾದ ಎಸ್.ಎಂ.ವಿಜಯಕುಮಾರ್ ಹಾಗೂ ಅಜ್ಜಯ್ಯ ಅವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಯೂರ ಮಂಜುನಾಥ, ಪ್ರಾಚಾರ್ಯರಾದ ಅರವಿಂದ ಕುಲಕರ್ಣಿ, ಸಿದ್ದೇಶ್, ಜ್ಞಾನ ಭಾರತಿ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಜಿ.ಆರ್.ರಾಜು, ಜ್ಞಾನಭಾರತಿ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಬಸವರಾಜ್, ಶಿಕ್ಷಕರಾದ ಮಲೈಕಾ, ಸುವರ್ಣಾ ಇದ್ದರು.