ಕನ್ನಡ ಬೇಡ ಎನ್ನುವವರಿಗೆ ಸರ್ಕಾರ ಬುದ್ಧಿ ಕಲಿಸಲಿ

Kudligi Kasapa
Published on

ಕೂಡ್ಲಿಗಿ: ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅನ್ಯ ಭಾಷೆಗಳು ಪ್ರಾಬಲ್ಯ ಮೆರೆಯುತ್ತಿವೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್ ಕಳವಳ ವ್ಯಕ್ತಪಡಿಸಿದರು.

ಜಂಗಮ ಸೋವೆಹಳ್ಳಿ ಗ್ರಾಮದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮುಂಗಾರು ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾಷೆಯ ಅನಿವಾರ್ಯತೆ ಸೃಷ್ಟಿಸದ ಹೊರತು ಭಾಷೆಯ ಅನುಷ್ಠಾನ ಅಸಾಧ್ಯ. ನಿತ್ಯ ಭಾಷೆಯನ್ನು ಬೆಳೆಸಬೇಕಾದರೆ ಕನ್ನಡವನ್ನೇ ಬಳಸಬೇಕು. ಆಗ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ. ಭಾಷಿಕರ ಸಂಖ್ಯೆಯೂ ಹೆಚ್ಚುತ್ತದೆ. ವಿದ್ಯಾವಂತರು, ಹಣವಂತರು, ದೊಡ್ಡ ಹುದ್ದೆಯಲ್ಲಿರುವವರು ಕನ್ನಡದ ಕೀಳರಿಮೆ ತೊಡೆಯಬೇಕು. ಕನ್ನಡ ನೆಲದ ಸಕಲ ಸವಲತ್ತುಗಳು ಬೇಕು. ಆದರೆ, ಕನ್ನಡ ಭಾಷೆ ಬೇಡ ಎನ್ನುವವರಿಗೆ ಸರ್ಕಾರ ಬುದ್ಧಿ ಕಲಿಸಬೇಕಿದೆ ಎಂದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಎನ್.ಎಂ.ರವಿಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರು ದಿಢೀರ್ ಶ್ರೀಮಂತರಾಗುವ ಆಸೆಯಿಂದ ಕೊಟ್ಟಿಗೆ ಗೊಬ್ಬರ ಬಳಸದೆ, ರಾಸಾಯನಿಕಯುಕ್ತ ಗೊಬ್ಬರ, ಔಷಧಗಳ ಬಳಕೆ ಮಾಡುತ್ತಿದ್ದು, ನೆಲದ ಸತ್ವವನ್ನು ವಿಷಮಾಡಿದ್ದಾರೆ. ಯಥೇಚ್ಛವಾಗಿ ರಸಾಯನಿಕ ಗೊಬ್ಬರದ ಪರಿಣಾಮ ಬೆಳೆ-ಆಹಾರ ವಿಷಮಯವಾಗಿದೆ. ರೈತರು ಸಾವಯವ ಗೊಬ್ಬರ ಬಳಸುವ ಜತೆ ಸಿರಿಧಾನ್ಯಗಳನ್ನು ಬೆಳೆದರೆ ಉತ್ತಮ ಆರೋಗ್ಯದ ಜತೆ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಿ.ಬಿ.ಶಿವಾನಂದ ಒತ್ತಡ ಮುಕ್ತ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಮಾತನಾಡಿದರು. ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಹಾಸ್ಯ ಕಲೆ ಪ್ರಸ್ತುತ ಪಡಿಸಿದರು. ಸಾನ್ನಿಧ್ಯವನ್ನು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿ.ಗೀತಾ, ತಾಲೂಕು ಅಧ್ಯಕ್ಷ ಕೊಟ್ರಗೌಡ, ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಗ್ರಾಪಂ ಸದಸ್ಯ ಉಪ್ಪಾರ ಫಕ್ಕಿರಪ್ಪ, ಎಸ್ಡಿಎಂಸಿ ಅಧ್ಯಕ್ಷ ಉಪ್ಪಾರ ದುರುಗಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ, ಹಾಲಸ್ವಾಮಿ,ಹವ್ಯಾಸಿ ಬರಹಗಾರ ಸ್ವರೂಪನಂದ, ನಂದಿ ವಿರೂಪಾಕ್ಷಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಕಸಾಪ ಕಾರ್ಯದರ್ಶಿ ನಂದಿ ಬಸವರಾಜ ಅವರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಸ್ ವಿತರಣೆ ಮಾಡಿದರು. ನಂತರ ಸಾಧಕರಿಗೆ ಸನ್ಮಾನ ಮಾಡಲಾಯಿತು. ಅಗಸಗಟ್ಟೆ ತಿಂದಪ್ಪ ಸಂಗಡಿಗರು ಜಾನಪದ ಗೀತೆಗಾಯನ ಮಾಡಿದರು.

ಜಂಗಮ ಸೋವೆಹಳ್ಳಿಯಲ್ಲಿ ಮುಂಗಾರು ಸಂಭ್ರಮ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ್ ಚಾಲನೆ ನೀಡಿದರು. ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಕಾರ್ಯದರ್ಶಿ ನಂದಿ ಬಸವರಾಜ, ನಿಕಟ ಪೂರ್ವ ಅಧ್ಯಕ್ಷ ಎನ್.ಎಂ.ರವಿಕುಮಾರ್, ಎಸ್.ವಿ.ಸಿದ್ದರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net