

ಕೂಡ್ಲಿಗಿ: ವಿದ್ಯಾರ್ಥಿ ಜೀವನ ಭವಿಷ್ಯಕ್ಕೆ ಅಡಿಪಾಯವಿದ್ದಂತೆ. ಕಲಿಕೆಯ ವಯಸ್ಸಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಬಾಲಕರ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಶಿಕ್ಷಕರು ಸಹ ಮಕ್ಕಳ ಪ್ರಗತಿಗೆ ಪೂರಕವಾಗಿ ಶಿಕ್ಷಣದ ಜತೆ ಮೌಲ್ಯಗಳನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ತಿಳಿಸಿದರು.
ಎರಡು ತಿಂಗಳು ರಜೆ ಹಿನ್ನೆಲೆಯಲ್ಲಿ ಶಾಲೆ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಿಹಿ, ಗುಲಾಬಿ ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು ಬರಮಾಡಿಕೊಂಡರು. ಶಿಕ್ಷಕರಾದ ಶೋಭಾ, ರತ್ನಮ್ಮ, ರಾಜಮ್ಮ, ಕೆಂಗನಗೌಡ, ವಿಜಯ ಎಚ್.ಎಸ್, ಗುರುರಾಜ, ಬಸವರಾಜ, ಅಶ್ವಿನಿ ಇತರರಿದ್ದರು.