ಯುವ ಪೀಳಿಗೆಗೆ ದೇಶಪ್ರೇಮದ ಕಿಚ್ಚಿರಲಿ ಎಂದ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಅಧ್ಯಕ್ಷ ಡಾ.ರಘು ಅಕ್ಮಂಚಿ

28052022 Kudligi amruta mohastava
Published on

ಕೂಡ್ಲಿಗಿ: ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಬೇಕಾದರೆ ಯುವ ಪೀಳಿಗೆ ದೇಶಪ್ರೇಮದ ಕಿಚ್ಚನ್ನು ಹೊಂದಬೇಕು ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಅಧ್ಯಕ್ಷ ಡಾ.ರಘು ಅಕ್ಮಂಚಿ ಹೇಳಿದರು.

ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸೃತಿ ಇಲಾಖೆ ಹಾಗೂ ಪಪಂ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತಾನಾಡಿದರು.

ಭಾರತೀಯರು ಸ್ವಾತಂತ್ರ್ಯಕ್ಕಾಗಿ 1500 ವರ್ಷಗಳಿಂದಲೂ ಫ್ರೆಂಚರು, ಪೋರ್ಚುಗೀಸರು ಸೇರಿ ಅನೇಕ ದಾಳಿಕೋರರನ್ನು ಎದುರಿಸಬೇಕಾಯಿತು. ಅದರಂತೆ ಬ್ರಿಟಿಷರನ್ನು ಹೊಡೆದೋಡಿಸಲು ಅನೇಕರ ತ್ಯಾಗ, ಬಲಿದಾನವಾಗಿದ್ದ ಅವರನ್ನು ಸ್ಮರಿಸಬೇಕು. ಬರೀ ಶಾಂತಿಯಿಂದ ಸ್ವಾತಂತ್ರ್ಯ ಬಂದಿಲ್ಲ. ಕ್ರಾಂತಿ ಜತೆ ಅನೇಕ ಸಂತರು ಸಹ ತಮ್ಮದೇ ಶೈಲಿಯಲ್ಲಿ ಹೋರಾಟ ಮಾಡಿದ್ದರಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ. ಭಾರತ ಇಂದು ವಿಶ್ವದಲ್ಲಿಯೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಅಭೂತ ಪೂರ್ವ ಯಶಸ್ಸು ಸಾಧಿಸಿದೆ. ಅದರಂತೆ ರಕ್ಷಣೆ ವಿಷಯದಲ್ಲಿ ಶತ್ರು ರಾಷ್ಟ್ರಗಳ ಮುಂದೆ ತಲೆಎತ್ತಿ ನಿಲ್ಲುವಂತೆ ಮಾಡಿದ ಪ್ರಧಾನಿಯವರ ಕಾರ್ಯ ಕ್ಷಮತೆಗೆ ನಾವು ಹೆಮ್ಮೆ ಪಡಬೇಕು ಎಂದರು.

ಭಾರತ ಇಂದು ಎಲ್ಲ ರಂಗಗಳಲ್ಲೂ ವಿಶ್ವಗುರುವಾಗಿದೆ. ಆದ್ದರಿಂದ ಮುಂದಿನ ಯುವ ಪೀಳಿಗೆಯು ಸಹ ಅನೇಕ ಸ್ವಾತಂತ್ರ್ಯ ಸೇನಾನಿಗಳ ಕಥಾನಕವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವರಂತೆ ದೇಶಪ್ರೇಮಿಗಳಾಗಿ ಬಾಳಬೇಕಿದೆ ಎಂದರು.

ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಟಿ.ಜಗದೀಶ್, ಪಪಂ ಉಪಾಧ್ಯಕ್ಷೆ ಬಿ.ಸರಸ್ವತಿ, ಸ್ಥಾಯಿಸಮಿತಿ ಅಧ್ಯಕ್ಷ ಪಿ. ಚಂದ್ರು, ಸದಸ್ಯರಾದ ಕಾವಲಿ ಶಿವಪ್ಪನಾಯಕ, ಬಾಸೂನಾಯ್ಕ, ಪೂರ್ಯ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್, ಎಸ್.ದುರುಗೇಶ್, ಶ್ರೀಕಾಂತ್, ಬಿಜೆಪಿ ಮುಖಂಡರಾದ ಸೂರ್ಯಪಾಪಣ್ಣ,ಗುಳಿಗಿ ವೀರೇಶ್, ಪವಿತ್ರಾ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಸ್ಮಾರಕದಿಂದ ವಿವಿಧ ಶಾಲಾ ಮಕ್ಕಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಭಾತ್ ಪೇರಿ ನಡೆಸಿದರು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಶ ಧರಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net