ಕೂಡ್ಲಿಗಿ ಕ್ಷೇತ್ರದ 74 ಕೆರೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ; 670 ಕೋಟಿ ರೂ. ವೆಚ್ಚದ ಯೋಜನೆ

NY Gopala Krishna
ಎನ್.ವೈ.ಗೋಪಾಲಕೃಷ್ಣ.
Published on

ಕೂಡ್ಲಿಗಿ: 670 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸೋಮವಾರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸಾರ್ವಜನಿಕರಲ್ಲಿ ಹರ್ಷ ಉಂಟು ಮಾಡಿದೆ.

ಯಾವುದೇ ನೀರಾವರಿ ಸೌಲಭ್ಯ ಇಲ್ಲದ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಲೇ ಬರಲಾಗಿದೆ. ಆದರೆ, ಫಲ ಸಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎನ್.ವೈ.ಗೋಪಾಲಕೃಷ್ಣ, ಗೆದ್ದರೆ ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವುದು ಜಲ ಸಮಸ್ಯೆ ನಿವಾರಣೆಯಾಗುವ ಆಶಾಭಾವನೆ ಮೂಡಿದೆ.

ಕ್ಷೇತ್ರದಲ್ಲಿ 27 ದೊಡ್ಡ, 28 ಸಣ್ಣ ಕೆರೆಗಳಿವೆ. ದೊಡ್ಡ ಕೆರೆಗಳ ಒಟ್ಟು ನೀರಿನ ಸಾಮರ್ಥ್ಯ 1455.89 ಎಂಸಿಎಫ್‌ಟಿ ಇದ್ದರೆ, ಸಣ್ಣ ಕೆರೆಗಳ ಸಾಮರ್ಥ್ಯ 278.24 ಎಂಸಿಎಫ್‌ಟಿ ಇದೆ. ಉಳಿದಂತೆ 19 ಸಣ್ಣ ಪುಟ್ಟ ಕೆರೆಗಳಿದ್ದು, ತುಂಗಭದ್ರಾ ಜಲಾಯದಿಂದ ನೀರು ತುಂಬಿಸುವ ಕೆಲಸ ನಡೆಯಲಿದೆ.

ಈ ಕುರಿತು ಶಾಸಕ ಎನ್.ವೈ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಮೊದಲ ಸಲ ಚುನಾವಣೆಗೆಂದು ಕ್ಷೇತ್ರಕ್ಕೆ ಬಂದಾಗ ಕ್ಷೇತ್ರದ ಪರಿಸ್ಥಿತಿ ಹೇಳಿಕೊಳ್ಳುವಂತಿರಲಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಶ್ವತ ಯೋಜನೆ ಜಾರಿ ಮಾಡುವ ಗುರಿ ಹೊಂದಿದ್ದೆ. ಇದಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸಹದ್ಯೋಗಿಗಳ ಸಹಕಾರದಿಂದ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಕೆರೆಗಳ ಭರ್ತಿಯಾದರೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಕುಡಿವ ನೀರಿನ ಬವಣೆಯೂ ತಪ್ಪುತ್ತದೆ ಎಂದರು.

ಉಜ್ಜಿನಿ ಜಗದ್ಗುರುಗಳ ಸ್ವಾಗತ

ಕೊಟ್ಟೂರು: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 74 ಕೆರೆಗಳನ್ನು ತುಂಗಭದ್ರಾ ನದಿಯ ನೀರಿನಿಂದ ತುಂಬಿಸುವ 670 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಿರುವುದಕ್ಕೆ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಬರಪೀಡಿತ ಹಾಗೂ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಕೂಡ್ಲಿಗಿ ಪ್ರದೇಶವು ಮಳೆಯನ್ನೇ ಅವಲಂಬಿಸಿದೆ. ಕುಡಿವ ನೀರಿಗೂ ತತ್ವಾರ ಇರುವ ಈ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ನಿರ್ಧಾರ ಶ್ಲಾಘನೀಯ. ಸದಾ ಮಲತಾಯಿ ಧೋರಣೆ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣರು ಸರ್ಕಾರದಿಂದ ಮಂಜೂರು ಮಾಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ. ಯಾವುದೇ ಜನಪ್ರತಿನಿಧಿಗಳು ಬಂದರೂ ನೀರಿನ ವಿಷಯ ಪ್ರಸ್ತಾಪ ಮಾಡುತ್ತಿದ್ದೆವು. ಶಾಸಕರಿಗೂ ಗೆದ್ದು ಬಂದ ಸಂದರ್ಭ ಮೊದಲು ಈ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಎಂದಿದ್ದೆವು. ಈ ಯೋಜನೆ ಸಕಾಲದಲ್ಲಿ, ಸಮರ್ಪಕವಾಗಿ ಜಾರಿಯಾಗಬೇಕು. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳು ಬರುವಂತಾಗಲಿ ಎಂದು ಉಜ್ಜಿನಿ ಜಗದ್ಗುರುಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net