

ಕೂಡ್ಲಿಗಿ: ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಅಭೂತಪೂರ್ವ ಯಶಸ್ಸು ಪಡೆಯಲು ಬಿ.ಎಸ್.ಯಡಿಯೂರಪ್ಪ ಕಾರಣ ಎಂದು ಪಕ್ಷದ ವಿಜಯನಗರ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪಾಟೀಲ್ ಚನ್ನಬಸವನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಂಡಲದಿಂದ ಗುರುವಾರ ಆಯೋಜಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 82 ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸಂಘಟನೆಗೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಭದ್ರ ಬುನಾದಿ ಹಾಕಿದರು ಎಂದು ತಿಳಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದರು. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ ಬಾಂಡ್, ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆಯು ಜನ ಮನ್ನಣೆ ಪಡೆದ ಕಾರ್ಯಕ್ರಮಗಳಾಗಿವೆ. ಕೃಷಿ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಕೂಡ್ಲಿಗಿ ಕ್ಷೇತ್ರಕ್ಕೆ 800 ಕೋಟಿ ರೂ. ನೀಡಿ 74 ಕೆರೆಗಳಿಗೆ ನೀರು ತುಂಬಿಸಲು ಕಾರಣರಾದರು ಎಂದು ಚನ್ನಬಸನಗೌಡ ಪಾಟೀಲ್ ತಿಳಿಸಿದರು.
ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಾದ ಎಂ.ಸಂಜನಾ, ಎಂ.ಅಮೃತ, ಸಾನಿಯಾ, ಬಿ.ಲಕ್ಷ್ಮೀ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ದುರುಗೇಶ್, ಪ್ರಮುಖರಾದ ಎಸ್.ಸಣ್ಣ ಬಾಲಪ್ಪ, ವಾಗೀಶ ಮೂರ್ತಿ, ಅಜಯ್, ಸೊಲ್ಲೇಶ್, ಭರತ್ ರಾಮ್, ಯಜಮಾನಪ್ಪ, ಲಕ್ಷ್ಮೀಬಾಯಿ ಕಾಂತರಾಜ, ಶಾರದಾಬಾಯಿ ಇದ್ದರು.