

ಕೂಡ್ಲಿಗಿ: ಪಹಣಿಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಂಡಲದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ಖಚಿತವಾಗುತ್ತಿದ್ದಂತೆ ವಕ್ಫ್ ಮಂಡಳಿ ಸಾರ್ವಜನಿಕ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದೆ. ಅದರಲ್ಲೂ ರಾಜ್ಯದಲ್ಲಿ ಇಂತಹ ಕೃತ್ಯಗಳಿಗೆ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ. ರೈತರ ಜಮೀನು, ಮಠ ಮಾನ್ಯಗಳ ಆಸ್ತಿ ಯನ್ನು ವಕ್ಫ್ ಮಂಡಳಿ ವಶಕ್ಕೆ ಪಡೆಯಲು ಮುಂದಾಗಿರುವುದು ಖಂಡನೀಯ.
ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಹೆಸರು ತೆಗೆದು ಹಾಕಬೇಕು. ಇಲ್ಲವಾದಲ್ಲಿ ಗ್ರಾಮ ಮಟ್ಟದಲ್ಲಿಯೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ತಹಸಿಲ್ ಕಚೇರಿವರೆಗೆ ರ‌್ಯಾಲಿ ನಡೆಸಿ, ತಹಸೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿದರು.
ಬಿಜೆಪಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಜಿಪಂ ಮಾಜಿ ಉಪಾಧ್ಯಕ್ಷೆ ದೀನಾ ಮಂಜುನಾಥ, ಪ್ರಮುಖರಾದ ಪಿ.ಮಂಜುನಾಥ ನಾಯಕ, ಅಜೇಯ್ ಕುಮಾರ್, ಎಲ್.ಪವಿತ್ರಾ, ಎಸ್. ದುರುಗೇಶ್, ಪ್ರಾಣೇಶ್ ರಾವ್, ಸಚಿನ್ ಕುಮಾರ್, ಸೂಲದಹಳ್ಳಿ ರಾಜಣ್ಣ, ಗುರಿಕಾರ ರಾಘವೇಂದ್ರ, ಲಕ್ಷ್ಮೀ ಬಾಯಿ ಕಾಂತರಾಜ ಇದ್ದರು.