

ಕೂಡ್ಲಿಗಿ: ಬೂತ್‌ಮಟ್ಟದಲ್ಲಿ ಹೆಚ್ಚಿನ ಸದಸ್ಯತ್ವ ನೋಂದಣಿಗೆ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ತಿಳಿಸಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಮಂಡಲ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದೇಶದ ಸುಭದ್ರತೆಗೆ ಬಿಜೆಪಿ ಪ್ರಸಕ್ತ ವರ್ಷ ಸದಸ್ಯತಾ ನೋಂದಣಿ ಅಭಿಯಾನಕ್ಕೆ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರ ಸದಸ್ಯತ್ವ ನೋಂದಣಿ ಗುರಿ ನೀಡಲಾಗಿದೆ. ಕಾರ್ಯಕರ್ತರು 254 ಬೂತ್‌ಗಳಿಗೆ ಭೇಟಿ ನೀಡಿ, ಪ್ರತಿ ಬೂತ್‌ನಲ್ಲಿ 300 ಜನರ ಸದಸ್ಯತ್ವ ನೋಂದಣಿ ಮಾಡಿಸಬೇಕು. ಇದರಿಂದ ಪಕ್ಷ ಸಂಘಟನೆಗೆ ಬಲ ಬಂದಾಗುತ್ತದೆ. ಮುಂಬರುವ ಸ್ಥಳೀಯ ಚುನಾವಣೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ತಳಮಟ್ಟದಲ್ಲಿ ಪಕ್ಷ ಬಲ ಪಡಿಸಲು ಈಗಾಗಲೇ ಯೋಜನೆ ರೂಪಿಸಿದ್ದು, ಜಿಲ್ಲಾ ಸದಸ್ಯತ್ವದ ಅಭಿಯಾನದ ಉಸ್ತುವಾರಿ ಸಿದ್ಧಾರ್ಥ ಸಿಂಗ್ ಅವರು ವಿಜಯನಗರ ಜಿಲ್ಲೆಯ ಅತಿ ಹೆಚ್ಚು ಸದಸ್ಯತ್ವ ಮಾಡಿದವರಿಗೆ ಒಂದು ಲಕ್ಷದ ಒಂದು ಸಾವಿರದ ಎಂಟು ರೂಪಾಯಿ ಬಹುಮಾನವನ್ನು ವೈಯಕ್ತಿಕವಾಗಿ ನೀಡಲಿದ್ದಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೂತ್ ಮಟ್ಟದಲ್ಲಿ ನೋಂದಣಿ ಮಾಡುವಂತೆ ಕೋರಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ ಮಾತನಾಡಿ, ಈಗಾಗಲೇ ಪಕ್ಷದ ಕಾರ್ಯಕ್ರಮ ಹಾಗೂ ಸಂಘಟನೆಯಲ್ಲಿ ಕೂಡ್ಲಿಗಿ ಮಂಡಲ ದ್ವಿತೀಯ ಸ್ಥಾನದಲ್ಲಿದ್ದು, ಪಕ್ಷದ ಸಂಘಟನೆ ಬಲವಾಗಿದೆ. ಸದಸ್ಯತ್ವ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕ ಬಲ್ಲಾಹುಣಸೆ ರಾಮಣ್ಣ, ಬಿಜೆಪಿ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಗುಳಿಗೆ ವೀರೇಂದ್ರ, ಮುಖಂಡರಾದ ಸೂರ್ಯಪಾಪಣ್ಣ, ದೀನಾ ಮಂಜುನಾಥ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಿ.ಮಂಜುನಾಥ ನಾಯಕ, ಸಿದ್ದೇಶ್, ನಿಕಟಪೂರ್ವ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಮಂಡಲ ಕಾರ್ಯದರ್ಶಿ ಎಲ್.ಪವಿತ್ರಾ, ಮಹಾಲಕ್ಷ್ಮೀ, ಕಾಳಮ್ಮ, ಸುಮಿತ್ರಾ, ಎಸ್.ಸಣ್ಣ ಬಾಲಪ್ಪ, ಉಗ್ರೇಶ್, ವಸಂತ, ವಾಗೀಶ್ ಮೂರ್ತಿ ಇತರರಿದ್ದರು.