ಪರಿಸರ ಪ್ರೇಮಿ ಗೂಳೆಪ್ಪ ಸಮಾಜದ ಶಕ್ತಿ

Untitled design(13)
ಕೂಡ್ಲಿಗಿಯಲ್ಲಿ ‘ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ’ ಪುಸ್ತಕವನ್ನು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ್ ಬಿಡುಗಡೆ ಮಾಡಿದರು. ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು, ಲೇಖಕ ಭೀಮಣ್ಣ ಗಜಾಪುರ, ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ, ಜಿಪಂ ಮಾಜಿ ಸದಸ್ಯ ಹೊಂಬಾಳೆ ರೇವಣ್ಣ, ತಾಪಂ ಮಾಜಿ ಸದಸ್ಯ ಪಾಪನಾಯಕ, ಬಣವಿಕಲ್ಲು ಎರಿಸ್ವಾಮಿ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ತೃತೀಯ ಲಿಂಗಿ ಸ್ನೇಹ, ಕಡ್ಲೆ ವೀರೇಶ್ ಇದ್ದರು.
Published on

ಕೂಡ್ಲಿಗಿ: ಈ ನಾಡುಕಂಡ ಅಪ್ರತಿಮ ಪರಿಸರ ಪ್ರೇಮಿ ಭಟ್ರಳ್ಳಿ ಗೂಳೆಪ್ಪ. ಇವರು ವ್ಯಕ್ತಿಯಲ್ಲ, ಸಮಾಜದ ಶಕ್ತಿ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಜ್ಞಾನಭಾರತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬುಧವಾರ ಗಜಾಪುರ ಕಾವ್ಯ ಪ್ರಕಾಶನದಿಂದ ಲೇಖಕ ಭೀಮಣ್ಣ ಗಜಾಪುರ ರಚಿಸಿದ ‘ಪರಿಸರ ಪ್ರೇಮಿ ಭಟ್ರಳ್ಳಿ ಗೂಳೆಪ್ಪ’ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು. ಅನಕ್ಷರಸ್ಥನಾದರು ಗೂಳೆಪ್ಪ ಅವರ ಪರಿಸರ ಪ್ರಜ್ಞೆ, ಅರಣ್ಯದ ಮೇಲಿನ ಆತನ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ. ಪರಿಸರ ಪ್ರೇಮಿಗಳ ಹೆಸರಿನಲ್ಲಿ ಭಾಷಣ ಮಾಡಿದವರು ಒಂದೂ ಗಿಡವನ್ನು ಪೋಷಣೆ ಮಾಡಿರುವುದಿಲ್ಲ. ಆದರೆ ಸದ್ದಿಲ್ಲದೆ ಕೂಡ್ಲಿಗಿ ಅರಣ್ಯ ವ್ಯಾಪ್ತಿಯಲ್ಲಿನ 125 ಎಕರೆ ಅರಣ್ಯದಲ್ಲಿ ಗಿಡ ನೆಟ್ಟು ಪೋಷಣೆ ಮಾಡಿದವರು ಭಟ್ರಳ್ಳಿ ಗೂಳೆಪ್ಪ ಎಂದು ಬಣ್ಣಿಸಿದರು.

ಮುಂದಿನ ನಾಲ್ಕು ತಲೆಮಾರುಗಳಿಗೆ ಬೇಕಾಗುವ ಶುದ್ಧ ಆಮ್ಲಜನಕವನ್ನು ನೀಡಿದ ಮಹಾನ್ ವ್ಯಕ್ತಿ ಗೂಳೆಪ್ಪ. ಮನುಷ್ಯರಿಗಲ್ಲದೆ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಬೆಳೆಸಿ, ಅವುಗಳ ಉಳಿವಿಗೆ ಕಾರಣರಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಮುಂದಿನ ಯುವ ಪೀಳಿಗೆ ಅನುಸರಿಸಬೇಕು, ಇಂತಹವರಿಂದ ನಮ್ಮ ಸಸ್ಯ ಸಂಕುಲ, ಅರಣ್ಯ ಸಂಪತ್ತು ಉಳಿಯಲು ಸಾಧ್ಯ. ಸರ್ಕಾರ ಇವರ ಸೇವೆಯನ್ನು ಗುರುತಿಸಿ, ರಾಜ್ಯದ, ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.

ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಸಾನ್ನಿಧ್ಯವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಕಾವ್ಯ ಪ್ರಕಾಶನದಿಂದ ಸನ್ಮಾನಿಸಲಾಯಿತು. ಕೊಟ್ಟೂರಿನ ಹಂಸ ಪ್ರಿಯಾ ಕಲಾನಿಕೇತನ ವಿದ್ಯಾರ್ಥಿಗಳು ಭರತನಾಟ್ಯ ಪ್ರಸ್ತುತ ಪಡಿಸಿದರು. ಕೃತಿ ಲೇಖಕ ಭೀಮಣ್ಣ ಗಜಾಪುರ, ಬಿಇಒ ಮೈಲೇಶ್ ಬೇವೂರು, ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ, ಜಿಪಂ ಮಾಜಿ ಸದಸ್ಯ ಹೊಂಬಾಳೆ ರೇವಣ್ಣ, ತಾಪಂ ಮಾಜಿ ಸದಸ್ಯ ಪಾಪನಾಯಕ, ನಾಟಕಕಾರ ಎನ್.ಎಂ.ರವಿಕುಮಾರ್, ವಕೀಲರ ಸಂಘದ ಸಹ ಕಾರ್ಯದರ್ಶಿ ಡಿ.ಎಚ್.ದುರುಗೇಶ್, ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಖಜಾಂಚಿ ಎಚ್.ವೀರಣ್ಣ, ರೈತ ಸಂಘದ ದೇವರಮನೆ ಮಹೇಶ್, ಬಣವಿಕಲ್ಲು ಎರಿಸ್ವಾಮಿ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ತೃತೀಯ ಲಿಂಗಿ ಸ್ನೇಹ, ಕಡ್ಲೆ ವೀರೇಶ್, ಉಜ್ಜಿನಿ ರವಿ, ಉಜ್ಜಿನಿ ಭೀಮಣ್ಣ, ಸೂಲದಹಳ್ಳಿ ಮಾರೇಶ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net