

ಕೂಡ್ಲಿಗಿ: ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವ ಹಾಗೂ ವಿಜ್ಞಾನಿಗಳ ಕೊಡುಗೆಗಳ ಬಗ್ಗೆ ಸಮಗ್ರವಾಗಿ ತಿಳಿಸಿಕೊಡುವ ಮೂಲಕ ಅವರನ್ನು ಸಾಧಕರನ್ನಾಗಿ ಮಾಡುವ ಮಹತ್ವದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಶ್ರೀನಿವಾಸ್ ಹೇಳಿದರು.
ತಾಲೂಕಿನ ಅಮ್ಮನಕೇರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಭಾಷಾ ಪ್ರಯೋಗಾಲಯ ಹಾಗೂ ಪವಾಡ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕೌಶಲ ಮಟ್ಟವನ್ನು ಹೆಚ್ಚಿಸಲು ಪ್ರಯೋಗಾಲಯಗಳ ಅಗತ್ಯತೆ ಹೆಚ್ಚಿಸಬೇಕಿದೆ ಎಂದರು.
ಮಕ್ಕಳು ವಿಜ್ಞಾನ ಮಾದರಿಗಳನ್ನು ಉತ್ತಮವಾಗಿ ತಯಾರಿಸಿದ್ದಾರೆ. ಮಾಡಿ ಕಲಿ ತತ್ವದ ಆಧಾರದ ಮೇಲೆ ವಿಜ್ಞಾನ ಕಲಿಕೆ ಪರಿಪೂರ್ಣವಾಗಲು ಈ ರೀತಿಯ ಮಾದರಿಗಳು ಸಹಾಯಕ. ಮಕ್ಕಳ ಕಲಿಕೆಗೆ ಪೂರಕವಾಗಿ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್, ಪ್ರಯೋಗಾಲಯ, ಗ್ರಂಥಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಸೌರವ್ಯೆಹ, ದ್ಯುತಿ ಸಂಶ್ಲೇಷಣೆ, ಜಲಚಕ್ರ, ಸೌರಶಕ್ತಿ ಚಾಲಿತ ಫ್ಯಾನ್, ನರಕೋಶ, ಸರಳ ವಿದ್ಯುತ್ ಮಂಡಲ, ಸರಳ ಲೋಲಕ, ಎಸಿ-ಡಿಸಿ ಜನರೇಟರ್ ಸೇರಿದಂತೆ ಹಲವಾರು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೆಜೆವಿಎಸ್ ಅಧ್ಯಕ್ಷ ಜಿ.ಜಗದೀಶ್ ಮಕ್ಕಳಿಗೆ ವಿಜ್ಞಾನ ಗೀತೆ ಹೇಳಿಕೊಟ್ಟರು. ಕಾರ್ಯದರ್ಶಿ ಕುಮಾರಸ್ವಾಮಿ ಯೋಗಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರು. ಖಜಾಂಚಿ ಕೆ.ಎಂ.ರವಿಪ್ರಸಾದ್ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು. ಸಿಆರ್‌ಪಿಗಳಾದ ಗೂಳೆಪ್ಪ, ಬಿ.ಸಂದೀಪ್, ಗೋಣಿಬಸಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ದೊಡ್ಡಪ್ಪ, ನಿವೃತ್ತ ಶಿಕ್ಷಕ ಎಂ.ಎಂ. ಸಿದ್ದೇಶ್ವರ ಸ್ವಾಮಿ, ಶಿಕ್ಷಕರಿದ್ದರು.