ಪರಿಶಿಷ್ಟರ ಕಾಲನಿಗಳಲ್ಲಿ ಮೂಲ ಸೌಕರ್ಯ

Kudiligi CC Road work starts
ಕೂಡ್ಲಿಗಿ ಅಂಬೇಡ್ಕರ್ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ಪ್ರಮುಖರಾದ ಎಸ್.ದುರುಗೇಶ್, ಜುಮ್ಮೋಬನಹಳ್ಳಿ ಓಬಣ್ಣ ಇದ್ದರು.
Published on

ಕೂಡ್ಲಿಗಿ: ತಳ ಸಮುದಾಯದವರ ಜೀವನ ರೂಪಿಸಲು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ತಾಲೂಕಿನ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೂಲ ಸೌಕರ್ಯ ಒದಗಿಸಲು ಯೋಜನೆ ರೂಪಿಸಿದ್ದು ಮೊದಲಿಗೆ ಕಾಲನಿಗಳಲ್ಲಿ ರಸ್ತೆ, ಕುಡಿಯುವ ನೀರು, ನೈರ್ಮಲ್ಯಕ್ಕೆ ಆದ್ಯತೆ ನೀಡಿರುವೆ. ಕ್ಷೇತ್ರದಲ್ಲಿ ಇನ್ನೂ ತಳ ಸಮುದಾಯದ ಕಾಲನಿಗಳಲ್ಲಿ ನಿರೀಕ್ಷಿತ ಸೌಕರ್ಯಗಳಿಲ್ಲ. ಇದರಿಂದ ಜನರ ಆರೋಗ್ಯ ಸ್ಥಿತಿ ಸರಿಯಾಗಿಲ್ಲ. ಕ್ಷೇತ್ರದ ಬಹುತೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದರು.

ರಸ್ತೆ, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿರುವೆ. ಈಗಾಗಲೇ ಕ್ಷೇತ್ರದ ಬಹುತೇಕ ಪರಿಶಿಷ್ಟ ಜಾತಿ ಕಾಲನಿಗಳಿಗೆ ಭೇಟಿ ನೀಡಿ ಜವರ ಜೀವನ ಶೈಲಿ ಕಂಡು ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಮ್ಮನಕೆರೆ, ಚಂದ್ರಶೇಖರಪುರ, ಪಟ್ಟಣದ ಅಂಬೇಡ್ಕರ್ ಕಾಲನಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಿಂದುಳಿದ ಕಾಲನಿಗಳ ಸಮಗ್ರ ಅಭಿವೃದ್ಧಿ ಮಾಡಲು ಮುಂದಾಗುವುದಾಗಿ ತಿಳಿಸಿದರು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜತೆಯಲ್ಲಿಯೇ ತಳ ಸಮುದಾಯವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಶ್ರಮಿಸುವೆ ಎಂದು ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ತಿಳಿಸಿದರು.

ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ಪ್ರಮುಖರಾದ ಎಸ್.ದುರುಗೇಶ್, ಜುಮ್ಮೋಬನಹಳ್ಳಿ ಓಬಣ್ಣ, ಲೋಕೋಪಯೋಗಿ ಇಲಾಖೆ ಎಇಇ ಕೆ.ನಾನಗೌಡ, ಎಚ್.ದುರುಗಪ್ಪ, ಅಂಜಿನಪ್ಪ, ಸೋಮಣ್ಣ, ದಂಡೆಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net