

ಕೂಡ್ಲಿಗಿ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು, ಸದುಪಯೋಗಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಬರೀ ಮನೆಗೆಲಸಗಳಿಗೆ ಸೀಮಿತವಾಗಿಲ್ಲ. ಪುರುಷರ ಸಮನಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸ್ವಾಭಿಮಾನದಿಂದ ಜೀವನ ನಡೆಸಲು ನೆರವಾಗಲೆಂದು ಸರ್ಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಬಿಡುವಿನ ವೇಳೆಯಲ್ಲಿ ಹೊಲಿಗೆ ಯಂತ್ರದ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು.
ಪ್ರಸಕ್ತ ವರ್ಷದಲ್ಲಿ ಕ್ಷೇತ್ರದ 63 ಮಹಿಳೆಯರಿಗೆ ಹೊಲಿಗೆ ಯಂತ್ರಗಳು ನೀಡಲಾಗಿದೆ. ಇನ್ನೂ ಹೆಚ್ಚಿನ ಬೇಡಿಕೆಯಿದ್ದಲ್ಲಿ ಮಾಹಿತಿ ನೀಡಿದರೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಹೊಲಿಗೆ ಯಂತ್ರ, ಗುಡಿ ಕೈಗಾರಿಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ತಾಪಂ ಇಒ ವೈ. ರವಿಕುಮಾರ್, ಕೈಗಾರಿಕಾ ವಿಸ್ತಾರಣಾಧಿಕಾರಿ ಎನ್.ಕೆ.ಚೈತ್ರಾ ಇತರರಿದ್ದರು.