

ಕೂಡ್ಲಿಗಿ: ತಾಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.
ಪಟ್ಟಣದ ಗುಡೇಕೋಟೆ ರಸ್ತೆಯ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿ, ಅಮೂಲ್ಯ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ಜೀವಿಗಳಿಗೆ ಸುಸಜ್ಜಿತ ಕಟ್ಟಡದ ಜತೆ ಮೂಲ ಸೌಕರ್ಯ ಕಲ್ಪಿಸಲು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಂ.ವೀರಯ್ಯ ಮಾತನಾಡಿ, ನಿವೃತ್ತ ನೌಕರರು ಬ್ಯಾಂಕ್ ಸೇರಿ ಇತರ ಕೆಲಸಗಳಿಗೆ ತಾಲೂಕಿನ 45 ಕಿಮಿ ದೂರದ ಗ್ರಾಮಗಳಿಂದ ಬರುತ್ತಾರೆ. ಅವರಿಗೆ ಬೇಕಾದ ಮಾಹಿತಿ ಹಾಗೂ ವಿರಮಿಸಲು ಕಚೇರಿ ಅವಶ್ಯಕತೆ ಇದೆ. ಈಗಿನ ಕಟ್ಟಡ ಶಿಥಿಲಗೊಂಡಿದ್ದು, ಸೌಕರ್ಯಗಳು ಇಲ್ಲ. ಹೊಸ ಕಟ್ಟಡ ನಿರ್ಮಿಸಿಕೊಡಬೇಕೆಂದು ಕೋರಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಸಿದ್ದಪ್ಪ, ಜುಟ್ಲಿ ಹನುಮಂತಪ್ಪ, ವಿರೂಪಾಕ್ಷಪ್ಪ, ಜಾಫರ್, ಕಲ್ಲಹಳ್ಳಿ ಬಸಪ್ಪ, ಯು.ನಾಗಪ್ಪ, ಎ.ಎಂ.ಷಡಕ್ಷರಯ್ಯ, ದ್ವಾರಕ ಶಿವಾಚಾರ್ಯ, ದೇವೇಂದ್ರನಾಯ್ಕ, ಜಯರಾಮ್, ಕೆ.ಎಂ.ಬಸಯ್ಯ, ಶೇಖರಪ್ಪ ಇತರರಿದ್ದರು.