

ಕೂಡ್ಲಿಗಿ: ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಧರ್ಮ, ಭಕ್ತರ ರಕ್ಷಣೆ ಮಾಡುವುದು ಗುರುಗಳ ಧರ್ಮ, ಆದರೆ ಬಡವರು ಹಾಗೂ ಮದ್ಯ ವ್ಯಸನಿಗಳನ್ನು ಸರಿದಾರಿಗೆ ತರುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಾಧ್ಯ ಎಂದು ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಐಮುಡಿ ಶರಣಾರ್ಯರು ಹೇಳಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ 1853ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ ಎಂದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮತನಾಡಿ, ಕುಡಿತದ ಚಟದಿಂದ ಆರೋಗ್ಯ, ದುಡ್ಡು ಕಳೆದುಕೊಳ್ಳುವುದರ ಜತೆಗೆ ಕುಟುಂಬದಲ್ಲಿ ನೆಮ್ಮದಿಯೂ ಇಲ್ಲವಾಗುತ್ತದೆ. ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಬೇಕು. ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕಲಿಸುವ ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ ಎಂದರು.
ಉಪ ತಹಸೀಲ್ದಾರ್ ನೇತ್ರಾವತಿ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಣಕಾರ್ ವೀರಣ್ಣ, ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಇಒ ನರಸಪ್ಪ, ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಜನಜಾಗೃತಿ ವೇದಿಕೆ ನಿರ್ದೇಶಕರಾದ ಜಿ.ಆರ್. ಸಿದ್ದೇಶ್, ಗುಂಡಪ್ಪ, ಹಡಗಲಿ ವೀರಭದ್ರಪ್ಪ, ಎಲ್.ಪವಿತ್ರಾ, ಯೋಗೇಶ್ವರ್, ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್, ಶಿಬಿರಾಧಿಕಾರಿ ದಿನೇಶ್, ಆರೋಗ್ಯ ಸಹಾಯಕಿ ರಂಚಿತಾ, ಮೇಲ್ವಿಚಾರಕ ಸಚ್ಚಿನ್ ಇತರರಿದ್ದರು.