

ಸುಂಟಿಕೊಪ್ಪ: ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೇರಿ ಎಂಬ ಹೆಸರು ಗಳಿಸಿರುವ ಕೂಡಿಗೆ ಹಾಲಿನ ಡೇರಿಯು ಸದ್ಯದಲ್ಲೇ ಮೇಲ್ದರ್ಜೆಗೆ ಏರಲಿದ್ದು, ಮುಂದಿನ ದಿನಗಳಲ್ಲಿ ಮೊಸರು ಹಾಗೂ ಮಜ್ಜಿಗೆ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟ ಕೊಡಗು ಘಟಕದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶನಿವಾರ ಕೂಡಿಗೆ ಹಾಲಿನ ಡೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
1955ರಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಹಾಲು ಉತ್ಪಾದಕರ ಸಹಕಾರ ಸಂಘ ಕೂಡಿಗೆಯಲ್ಲಿ ಸ್ಥಾಪನೆಯಾಗಿದೆ. ಇದನ್ನು ಮದರ್ ಡೇರಿ ಎಂದು ಕೂಡ ಕರೆಯಲಾಗುತ್ತದೆ. ಇದೀಗ ಕಚೇರಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, 34 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಕಚೇರಿ ನಿರ್ವಹಣೆಗೆ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕೂಡಿಗೆ ಡೇರಿಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುಮಾರು 39 ಹಾಲು ಉತ್ಪಾದಕರ ಸಂಘಗಳಿದ್ದು, ಪ್ರತಿದಿನ ಜಿಲ್ಲೆಯಿಂದ ಸುಮಾರು 30 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ದಿನವೊಂದಕ್ಕೆ ಸುಮಾರು 55 ಸಾವಿರ ಲೀಟರ್ ಹಾಲು ಕೂಡಿಗೆ ಡೇರಿಯಿಂದ ಮಾರಾಟವಾಗುತ್ತದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಕಲುಗೂಡು, ರಾಮನಾಥಪುರದ ವಿವಿಧ ಹಾಲು ಉತ್ಪಾದಕರ ಸಂಘದಿಂದ 25 ಸಾವಿರ ಲೀಟರ್ ಹಾಲನ್ನು ಟ್ಯಾಂಕರ್ ಮೂಲಕ ತರಿಸಲಾಗುತ್ತಿದ್ದು, ಸಂಸ್ಕರಣೆ ಮಾಡಿ ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಲವೆಡೆ ಹಾಲು ಕಲಬೆರಕೆ ಪ್ರಕರಣ ಕಂಡುಬಂದಿದೆ. ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದ್ದರಿಂದ ಹೈನುಗಾರರು ಗುಣಮಟ್ಟದ ಹಾಲನ್ನು ಡೇರಿಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಳಪೆ ಗುಣಮಟ್ಟದ ಹಾಲನ್ನು ನಾವು ತಿರಸ್ಕರಿಸಿದ್ದು, ಅಂತಹ ಹಾಲು ಕೆಲ ಖಾಸಗಿ ಸಂಸ್ಥೆಗಳು ಮಾರಾಟ ಮಾಡುತ್ತಿವೆ. ಈ ಬಗ್ಗೆ ಗ್ರಾಹಕರು ಎಚ್ಚರ ವಹಿಸುವಂತೆ ಇದೇ ವೇಳೆ ಸಲಹೆ ನೀಡಿದರು.
ಕೊಡಗು ಕಾಫಿ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇದರಿಂದ ಹೈನುಗಾರಿಕೆ ಮಾಡುವವರ ಸಂಖ್ಯೆ ಕಡಿಮೆ ಇದೆ. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಹೆಚ್ಚು ಹಾಲು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಪ್ರೋತ್ಸಾಹ ನೀಡಲಾಗುವುದು. ಗುಡ್ಡೆಹೊಸೂರಿನಲ್ಲಿ ಬಲ್ಕ್ ಮಿಲ್ಕ್ ಕೂಲರ್ ಮಾಡುವ ಬಗ್ಗೆ ಸರ್ಕಾರದ ಮುಂದೆ ವಿಷಯ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
ಒಂದು ಲೀಟರ್ ಹಾಲಿಗೆ 30 ರೂ.50 ಪೈಸೆ ಹೈನುಗಾರರಿಗೆ ನೀಡಲಾಗುತ್ತಿದೆ. ಹಾಲು ದರ ಹೆಚ್ಚಳ ಮಾಡುವ ಬಗ್ಗೆ ಕೆಎಂಎಫ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇತರ ಉತ್ಪನ್ನ ಮಾರಿದರೆ ಕ್ರಮ: ಜಿಲ್ಲೆಯಲ್ಲಿ ಸುಮಾರು 50ಕ್ಕೂ ಅಧಿಕ ನಂದಿನಿ ಕ್ಷೀರ ಮಾರಾಟ ಕೇಂದ್ರಗಳಿವೆ. ಕೆಲವೆಡೆ ನಂದಿನಿ ಉತ್ಪನ್ನ ಬದಲಾಗಿ ಇತರ ಪದಾರ್ಥಗಳನ್ನೂ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬರುತ್ತಿದೆ. ಇದೇ ಚಾಳಿ ಮುಂದುವರಿದರೆ ಅಂತಹವರ ಏಜೆನ್ಸಿಗಳನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಜಿಲ್ಲೆಯ ವಿವಿಧ ಕ್ಷೀರ ಕೇಂದ್ರಗಳಲ್ಲಿನ ಸಮಸ್ಯೆಗೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸಾರ್ವಜನಿಕರು ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂವಾದದ ಬಳಿಕ ಕೂಡಿಗೆ ಹಾಲಿನ ಡೇರಿಯಲ್ಲಿ ಹಾಲು ಸಂಸ್ಕರಣೆ ಮಾಡುವ ಬಗ್ಗೆ ನಿರ್ದೇಶಕರು ಪತ್ರಕರ್ತರಿಗೆ ಮಾಹಿತಿ ನೀಡಿದರು. ಸಂವಾದದಲ್ಲಿ ಕೂಡಿಗೆ ಡೈರಿ ವಿಸ್ತರಣಾ ಅಧಿಕಾರಿ ವೀಣಾ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್, ಉಪಾಧ್ಯಕ್ಷ ಜಿ.ವಿ.ರವಿಕುಮಾರ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.