

ವಿಜಯವಾಣಿ ಸುದ್ದಿಜಾಲ ಮಧುರೆ
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಜನರ ಆಶೋತ್ತರಗಳನ್ನು ತಕ್ಷಣ ಈಡೇರಿಸಬಹುದಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮಸ್ಥರ ಅನುಕೂಲಕ್ಕಾಗಿ ಇಲ್ಲೊಂದು ಭವನ ನಿರ್ಮಿಸಬೇಕೆಂಬ ಒತ್ತಾಯ ಸುಮಾರು ವರ್ಷದಿಂದ ಕೇಳಿಬಂದಿತ್ತು. ಇದೀಗ ಅದು ಸಾಕಾರಗೊಳ್ಳಲಿದೆ. ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾತು ಕೊಟ್ಟಂತೆ ಕ್ರಮ:
ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಕಳೆದ 25 ವರ್ಷಗಳ ಗ್ರಾಮಸ್ಥರ ಪ್ರಯತ್ನ ನಡೆಸುತ್ತಿದ್ದರು. ಇದೀಗ ಸಾಕಾರಗೊಳ್ಳುತ್ತಿದೆ ಎಂದು ಶಾಸಕ ಧೀರಜ್‌ಮುನಿರಾಜು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಚುನಾವಣೆ ಬಳಿಕ ಇದನ್ನು ಕಾರ್ಯಗತಗೊಳಿಸುವುದಾಗಿ ಮಾತು ಕೊಟ್ಟಿದ್ದೆ ಅದರಂತೆ ಭವನ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.