ಹುಬ್ಬಳ್ಳಿಯಲ್ಲಿ ಶ್ರೀ ಅಭಿನವ ಶಂಕರ ಭಾರತೀಶ್ರೀ,  ನಗರದಲ್ಲಿ ಭವ್ಯ ಶೋಭಾಯಾತ್ರೆಗೆ ಸಿದ್ಧತೆ

IMG-20250221-WA0007-1.jpg
Published on

ಹುಬ್ಬಳ್ಳಿ: ಶಿವಮೊಗ್ಗ ಜಿಲ್ಲೆಯ ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 71ನೇ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶ್ರೀ ವಿದ್ಯಾಭಿನವ, ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿದ್ದು, ಫೆ. 23ರಂದು ಸಂಜೆ ಭವ್ಯ ಶೋಭಾಯಾತ್ರೆ ಏರ್ಪಡಿಸಲಾಗಿದೆ ಎಂದು ಇಲ್ಲಿಯ ಶ್ರೀ ಶಂಕರ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ಜೋಶಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಮ್ಮನ ಅಗಸಿಯಲ್ಲಿರುವ ಶಂಕರಮಠದಲ್ಲಿ ವಾಸ್ತವ್ಯ ಹೂಡಲಿರುವ ಸ್ವಾಮೀಜಿಯವರು ಅಂದಿನಿಂದ ಮಾರ್ಚ್ 2ರ ವರೆಗೆ ನಗರದಲ್ಲಿ ವಿಜಯಯಾತ್ರೆ ಕೈಗೊಳ್ಳುವರು ಎಂದರು.

ಸನಾತನ ಧರ್ಮ ಜಾಗೃತಿಗಾಗಿ ಹು-ಧಾ ಮಹಾನಗರ, ಗ್ರಾಮೀಣ, ಧಾರವಾಡ, ಕುಂದಗೋಳ, ಕಲಘಟಗಿ, ಅಳ್ನಾವರ ವಿವಿಧ ತಾಲೂಕುಗಳ ಭಕ್ತ ವೃಂದದವರು ಸೇರಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಫೆ. 23 ರಂದು ಸಂಜೆ 5ಕ್ಕೆ ಸ್ವಾಮೀಜಿಗಳನ್ನು ಸ್ವಾಗತ ಮಾಡಲಾಗುವುದು, ಮೂರುಸಾವಿರ ಮಠದ ಮೈದಾನದಿಂದ ಸಕಲ ವಾದ್ಯಮೇಳಗಳೊಂದಿಗೆ ಭವ್ಯ ಶೋಭಾಯಾತ್ರೆ ಮೂಲಕ ಶ್ರೀಗಳನ್ನು ಶಂಕರಮಠಕ್ಕೆ ಕರೆತರಲಾಗುವುದು. ಫೆ. 24ರಿಂದ ನಗರದ ವಿವಿಧ ಭಾಗದಲ್ಲಿ ಭಕ್ತರ ಮನೆಗಳಲ್ಲಿ ಪಾದಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಗಳು ನೆರವೇರಿಸಿ ಕೊಡಲಿದ್ದಾರೆ ಎಂದರು.

ಬ್ರಾಹ್ಮಣ ಸಂಘಟನೆಗಳು ಅಷ್ಟೇ ಅಲ್ಲದೆ ಸಮಸ್ತ ಹಿಂದೂ ಸಂಘಟನೆಗಳ ಪದಾಧಿಕಾರಿಗಳು, ಭಜನಾ ಮಂಡಳಿ, ಮಹಿಳಾ ಮಂಡಳಿಗಳು ಸೇರಿದಂತೆ ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀಮದ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿಯವರು ಯಾತ್ರೆಯ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯಾತ್ರೆ ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಆರ್.ಎನ್. ಜೋಶಿ ವಹಿಸುವರು ಎಂದರು.

ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ದತ್ತಮೂರ್ತಿ ಕುಲಕರ್ಣಿ, ಆರ್.ಜಿ. ಕವಟೇಕರ್, ಕಾರ್ಯದರ್ಶಿ ಡಾ. ಬಾಸ್ಕರ್ ಪಾಟೀಲ್, ಸದಸ್ಯರಾದ ಪವನ್ ಜೋಶಿ, ನರಸಿಂಹ ಕೋತವಾಲ್, ಎಸ್.ಆರ್. ಮಾಮಲೇದೇಶಪಾಂಡೆ, ಮೋಹನ್ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net