

ಕೂಡಲಸಂಗಮ: ಕೂಡಲಸಂಗಮ ಬಸವೇಶ್ವರ ವೃತ್ತದ ಬಸವಣ್ಣ ಮೂರ್ತಿಯನ್ನು ಶುಚಿಗೊಳಿಸಿ ನಿದ್ದೆಯಲ್ಲಿರುವ ಮಂಡಳಿ ಅಧಿಕಾರಿಗಳು, ರಕ್ಷಿಸೋಣ ಬನ್ನಿ ಕೂಡಲಸಂಗಮ ಅಭಿಯಾನವನ್ನು 3ನೇ ಭಾನುವಾರ 25ಕ್ಕೂ ಅಧಿಕ ಯುವಕರು ಮುಂದುವರಿಸಿದರು.
ಧೂಳಿನಿಂದ ಕೂಡಿದ್ದ ಬಸವೇಶ್ವರ ವೃತ್ತದಲ್ಲಿನ ಬಸವಣ್ಣನ ಮೂರ್ತಿ, ಮಂಟಪವನ್ನು ಸಂಪೂರ್ಣ ಸ್ವಚ್ಛಗೊಳಿಸಿ ವಿಭೂತಿ ಹಚ್ಚಿ, ಹಾರ ಹಾಕಿದರು. ವೃತ್ತ ಹಾಗೂ ಕೆಳಗಿನ ಉದ್ಯಾನದಲ್ಲಿನ ತ್ಯಾಜ್ಯ ತೆರವುಗೊಳಿಸಿದರು.
ಮಳೆ ನೀರಿನಿಂದ ಮಂಟಪಕ್ಕೆ ಧಕ್ಕೆಯಾಗುವುದು. ಕೂಡಲೇ ಮಂಡಳಿ ಅಧಿಕಾರಿಗಳು ಕಾಂಕ್ರೀಟ್ ಅಥವಾ ಟೈಲ್ಸ್ ಹಾಕುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ರಕ್ಷಿಸೋಣ ಬನ್ನಿ ಕೂಡಲಸಂಗಮ ಅಭಿಯಾನದ ಯುವಕರು ಸಹಯೋಗದಲ್ಲಿ ನಾವೇ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದು ಕರಸಂಗಯ್ಯ ಗುಡಿ, ತೀರ್ಥಲಿಂಗ ಬೆಳಗಲ್ಲ ಹೇಳಿದರು.
ಮುಖಂಡ ನಾಗರಾಜ ಹೊಂಗಲ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಇಲ್ಲಿಯ ಯುವಕರು ಸ್ವ ಇಚ್ಚೆಯಿಂದ ಮಂಡಳಿಯ ಸ್ಥಳಗಳನ್ನು ಸ್ವಚ್ಚಗೊಳಿಸುವ ಮೂಲಕ ಭಕ್ತರಿಗೆ ಅನುಕೂಲ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇದನ್ನು ನೋಡಿ ಮಂಡಳಿ ಅಧಿಕಾರಿಗಳು ನಾಚಿಕೆ ಪಡಬೇಕು. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಕೂಡಲಸಂಗಮ ಸುಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಮೂಲಸೌಲಭ್ಯ ಕೊರತೆ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೂಡಲೇ ಸರ್ಕಾರ ಖಾಯಂ ಆಯುಕ್ತರನ್ನು ನೇಮಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಹೇಳಿದರು.
ಮುಖಂಡ ಎಂ.ಜಿ. ಕುರಿ ಮಾತನಾಡಿ, ಮುಂದಿನ ಭಾನುವಾರ ಬಸವೇಶ್ವರ ವೃತ್ತದಿಂದ ಚಾಲುಕ್ಯ ಮಹಾದ್ವಾರದವರೆಗಿನ ರಸ್ತೆಯಲ್ಲಿಯ ಮಣ್ಣನ್ನು ತೆಗೆಯುವುದು, ದಾಸೋಹ ಭವನ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನದಲ್ಲಿ ಬಸವರಾಜ ಚೌಧರಿ, ಸಲಿಂ ವಾಲಿಕಾರ, ಶ್ರೀಧರ ಗುಗ್ಗರಿ, ಸಂಗು ಮಡಿವಾಳರ, ಎಸ್.ಕೆ. ಗೌಡರ, ಬಸವರಾಜ ಚಲವಾದಿ, ಮಹಾಂತೇಶ ಬಾದಾಮಿ ಮುಂತಾದವರು ಇದ್ದರು.
ಕದ್ದು ಫೋಟೋ ತೆಗೆದ ಸಿಬ್ಬಂದಿಗೆ ತರಾಟೆ
ಕೂಡಲಸಂಗಮ ಮಂಡಳಿಯ ಪ್ರಥಮ ದರ್ಜೆ ಸಹಾಯಕ ಬಸವರಾಜ ಕಳ್ಳಿ ಉದ್ದೇಶ ಪೂರ್ವಕವಾಗಿ ಅಭಿಯಾನದಲ್ಲಿ ಪಾಲ್ಗೊಂಡ ಕೆಲವರ ಛಾಯಾಚಿತ್ರವನ್ನು ಕದ್ದು ತೆಗೆಯುತ್ತಿದ್ದಾಗ ಅಭಿಯಾನದ ಯುವಕರು ಮಾತನಾಡಿ, ಎಲ್ಲರೂ ನಿಂತುಕೊಳ್ಳುತ್ತೇವೆ ಫೋಟೋ ತೆಗೆದುಕೊಳ್ಳಿ ಎಂದರು. ಇದಕ್ಕೆ ಬಸವರಾಜ ಕಳ್ಳಿ ಪ್ರತಿಕ್ರಿಯಿಸಿ, ನೀವು ತೋರಿಕೆಗಾಗಿ ಈ ಕಾರ್ಯ ಮಾಡುತ್ತಿದ್ದೀರಿ ಎಂದಿದ್ದಕ್ಕೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗೌಡರ ಉತ್ತರಿಸಿ, ಇಂತಹ ಮಾತುಗಳನ್ನು ಆಡುವುದು ಬಿಟ್ಟು ಸರ್ಕಾರಿ ನೌಕರರು ಕಾಯಕ ಮಾಡುವುದನ್ನು ಕಲಿಯಿರಿ. ನೀವು ಸಮರ್ಪಕವಾಗಿ ಕೆಲಸ ಮಾಡಿದ್ದರೆ ನಾವು ಈ ಕಾರ್ಯ ಮಾಡುತ್ತಿರಲಿಲ್ಲ. ನಿಮ್ಮಂಥ ಸಿಬ್ಬಂದಿಯಿಂದಲೇ ಈ ಸುಕ್ಷೇತ್ರ ಸಂಪೂರ್ಣ ಹಾಳಾಗಿರುವುದು, ಕಾರ್ಮಿಕರು ಹಾದಿ ತಪ್ಪಿರುವುದು, ಉನ್ನತ ಅಧಿಕಾರಿಗಳಿಗೂ ತಪ್ಪು ಮಾಹಿತಿ ಕೊಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅಭಿಯಾನದ ಯುವರು ಕೆಲಸ ಮಾಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಿದರು.