

ಧಾರವಾಡ: ಕೋವಿಡ್‌ನಿಂದ ಲಕ್ಷಾಂತರ ಜನ ಮೃತಪಟ್ಟರು. ವಾಯುಮಾಲಿನ್ಯದಿಂದ ದೇಶದಲ್ಲಿ ಪ್ರತಿವರ್ಷ 17 ಲಕ್ಷ ಜನ ಸಾವನ್ನಪ್ಪುತ್ತಿರುವುದು ಗಂಭೀರ ವಿಷಯ. ಈ ಬಗ್ಗೆ ಮಾಧ್ಯಮಗಳು ಹೆಚ್ಚು ತಿಳಿವಳಿಕೆ ನೀಡಬೇಕು. ವಿದ್ಯಾರ್ಥಿಗಳು ಆರಾಮದಾಯಕ ಜೀವನದ ಬದಲು ಪ್ರಯತ್ನಶೀಲ ಹಾಗೂ ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ನೇಚರಸ್ಟ್ ಇಕೋ ವಿಲೇಜ್ ಸಿಇಒ ಪಂಚಾಕ್ಷರಿ ವಿ. ಹಿರೇಮಠ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಮೊದಲು ಶೇ. 35ರಷ್ಟು ಇದ್ದ ಕಾಡು ಈಗ ಶೇ 9.8ಕ್ಕೆ ಕುಸಿದಿದೆ. 2030ರ ವೇಳೆಗೆ ಶೇ. 60ರಷ್ಟು ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂದರು.
ಹಿರಿಯ ಪತ್ರಕರ್ತ ವಿಠ್ಠಲ್‌ದಾಸ ಕಾಮತ್ ಮಾತನಾಡಿ, ಪತ್ರಿಕೋದ್ಯಮ ಕೇವಲ ರಾಜಕೀಯ ಕ್ಷೇತ್ರಕ್ಕೆ ಆದ್ಯತೆ ನೀಡುವುದಲ್ಲ. ತೊಂದರೆಗೊಳಗಾದ ಜನರಿಗೆ ಪರಿಹಾರೋಪಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಡಾ. ಸಂಜಯಕುಮಾರ ಮಾಲಗತ್ತಿ ಮಾತನಾಡಿದರು.
ಸಿನಿಮಾ ಬರಹಗಾರ, ಛಾಯಾಗ್ರಾಹಕ ಸುನಿಲಕುಮಾರ ಸುಧಾಕರ, ಬೋಧನಾ ಸಹಾಯಕರಾದ ಡಾ. ನಯನಾ ಗಂಗಾಧರಪ್ಪ, ಡಾ. ಶಕುಂತಲಾ ಸೊರಟೂರ, ಡಾ. ನಾಗರಾಜ ರೋಣದ, ಇತರರಿದ್ದರು. ಡಾ. ಮಂಜುನಾಥ ಅಡಿಗಲ್ ಸ್ವಾಗತಿಸಿದರು.