

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕ ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆಯ ಬೆಳಗು- 1 ಪಠ್ಯಪುಸ್ತಕದ 4ನೇ ಅಧ್ಯಾಯದ `ರಾಷ್ಟ್ರೀಯತೆಯ ಸುತ್ತ' ಲೇಖನ ವಿವಾದ ಸೃಷ್ಟಿಸಿತ್ತು. ರಾಷ್ಟ್ರೀಯತೆ, ಸಂವಿಧಾನದ ಕುರಿತು ಅವಹೇಳನಕಾರಿ ಅಂಶಗಳಿರುವ ಕುರಿತು `ವಿಜಯವಾಣಿ' ದಿನಪತ್ರಿಕೆ ಬೆಳಕು ಚೆಲ್ಲಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯ, ಸ್ನಾತಕ ಕನ್ನಡ ವಿಷಯದ ಅಭ್ಯಾಸಸೂಚಿ ಮಂಡಳಿಯನ್ನು (ಬೋರ್ಡ್ ಆಫ್ ಸ್ಟಡೀಸ್) ಅಮಾನತು ಮಾಡಿದೆ. ಈ ಕುರಿತು ಕುಲಸಚಿವ ಡಾ. ಎ. ಚನ್ನಪ್ಪ ಆದೇಶ ಹೊರಡಿಸಿದ್ದಾರೆ.
ಅಭ್ಯಾಸಸೂಚಿ ಮಂಡಳಿಗೆ ಕವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ನಾಯಕ ಅಧ್ಯಕ್ಷರಾಗಿದ್ದರು. ಗದಗ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿ.ಎಂ. ಗುರುಮಠ ಹಾಗೂ ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಸದಸ್ಯರಾಗಿದ್ದರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಮಹೇಶ ಚಿಂತಾಮಣಿ ವಿಷಯ ಪರಿಣಿತರಾಗಿದ್ದರು.
ಪಠ್ಯಪುಸ್ತಕದ ಲೇಖನದಿಂದ ವಿವಾದ ಏರ್ಪಟ್ಟ ಹಿನ್ನೆಲೆಯಲ್ಲಿ ಸ್ನಾತಕ ಕನ್ನಡ ವಿಷಯದ ಅಭ್ಯಾಸಸೂಚಿ ಮಂಡಳಿಯನ್ನು ಅಮಾನತು ಮಾಡಲಾಗಿದೆ ಕುಲಸಚಿವ ಡಾ. ಎ. ಚನ್ನಪ್ಪ ತಿಳಿಸಿದ್ದಾರೆ.